ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಪಟ್ಟಣದ ರಾಣಿ ಚನ್ನಮ್ಮ ವೃತ್ತ ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದು, ವೀರರಾಣಿಯ ನಾಡಿನಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಐತಿಹಾಸಿಕ ಸ್ಮಾರಕಗಳು, ಕೋಟೆ ಆವರಣ ಹಾಗೂ ಪ್ರಮುಖ ವೃತ್ತಗಳಲ್ಲಿ ಉತ್ಸವದ ಸಂಭ್ರಮ ಕಳೆಗಟ್ಟಿದೆ. ಕಿತ್ತೂರಿನ ಗತವೈಭವವನ್ನು ನೆನಪಿಸುವ ದೃಶ್ಯಗಳು ಜನರ ಗಮನ ಸೆಳೆಯುತ್ತಿವೆ. ರಾಜ್ಯಾದ್ಯಂತ ಸಂಚರಿಸಿದ ವಿಜಯಜ್ಯೋತಿ ಜಾತ್ರೆಯನ್ನು ಶಾಸಕ ಬಾಬಾಸಾಹೇಬ ಪಾಟೀಲ ಅವರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡರು. ಬಳಿಕ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನಂತರ ಜನಪ್ರತಿನಿಧಿಗಳು ಹಾಗೂ ಗಣ್ಯರು ವೀರರಾಣಿ ಕಿತ್ತೂರು ಚನ್ನಮ್ಮ ಸೇರಿ ಇತರ ಮಹನೀಯರ ಪುತ್ಥಳಿಗಳಿಗೆ ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ತಹಸೀಲ್ದಾರ್ ಕಲ್ಲಗೌಡ ಪಾಟೀಲ, ತಾಪಂ ಇಒ ಮಹೇಶ ಹೂಲಿ, ಬಿಇಒ ಚನ್ನಬಸಪ್ಪ ತುಬಾಕಿ ಸೇರಿದಂತೆ ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.ಮೂರು ದಿನಗಳ ಉತ್ಸವದ ಹಿನ್ನೆಲೆಯಲ್ಲಿ ಕಿತ್ತೂರು ಪಟ್ಟಣ ಐತಿಹಾಸಿಕ ಪರಂಪರೆ, ಕಲೆ, ಸಂಸ್ಕೃತಿ ಹಾಗೂ ವೀರ ಪರಂಪರೆಯ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ರಾಣಿ ಚನ್ನಮ್ಮನ ಸಾಹಸಗಾಥೆ ಸ್ಮರಿಸುವ ಮೂಲಕ ಜನರಲ್ಲಿ ದೇಶಭಕ್ತಿ ಮತ್ತು ಕನ್ನಡದ ಅಭಿಮಾನವನ್ನು ಜಾಗೃತಗೊಳಿಸುತ್ತಿದೆ. ಉತ್ಸವದಲ್ಲಿ ಆಕರ್ಷಕ ಜಾನಪದ ಕಲಾವಾಹಿನಿಗೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು.
--------
ಕಿತ್ತೂರಿನಲ್ಲಿ ಕಳೆಗಟ್ಟಿದ ಚನ್ನಮ್ಮನ ಉತ್ಸವ
ಕಿತ್ತೂರು ಉತ್ಸವವು ಕೇವಲ ಆಚರಣೆಯಲ್ಲ; ಅದು ನಾಡಿನ ಇತಿಹಾಸ, ವೀರತ್ವ, ಸ್ವಾಭಿಮಾನ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ವಿಜಯ ಜ್ಯೋತಿ ಯಾತ್ರೆಗೆ ದೊರೆತ ಭವ್ಯ ಸ್ವಾಗತ ಹಾಗೂ ಜನಪದ ಕಲಾಮೇಳದ ವೈಭವವು ಕಿತ್ತೂರಿನ ಐತಿಹಾಸಿಕ ಪರಂಪರೆಯ ಮೇಲಿನ ಜನರ ಅಭಿಮಾನವನ್ನು ಅನಾವರಣಗೊಳಿಸಿತು. ಯಾತ್ರೆಯನ್ನು ಕಣ್ತುಂಬಿಕೊಂಡ ಸಾರ್ವಜನಿಕರು ಉತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ವಿಜಯ ಜ್ಯೋತಿ ಯಾತ್ರೆಯಲ್ಲಿ ಡೊಳ್ಳು ಕುಣಿತ, ಪುರುವಂತಿಕೆ, ಮರಡಿ ಮಹಿಳೆಯರ ಡೊಳ್ಳು ಕುಣಿತ, ಕರಡಿ ಮಜಲು, ಸಂಬಳ ವಾದನ, ತಮಟೆ ವಾದನ, ಕರಬಲ ಕುಣಿತ, ನಾಸಿಕ್ ಡೋಲ್, ಹೆಜ್ಜೆಮೇಳ, ಗೊಂಬೆಗಳ ಕುಣಿತ, ಕೋಲಾಟ, ಜಾಂಜ್ ಪಥಕ, ಡಪ್ಪು ಕುಣಿತ, ಜಗ್ಗಲಿಗೆ ಹಾಗೂ ಭಜನಾ ತಂಡಗಳಂತಹ ವಿವಿಧ ಕಲಾಪ್ರಕಾರಗಳು ಜನರ ಗಮನ ಸೆಳೆದವು.
ಬಾಕ್ಸ್
ಪ್ರತಿ ವರ್ಷ ಚನ್ನಮ್ಮಾಜಿಯ ವಿಜಯೋತ್ಸವದ ಸಂದರ್ಭದಲ್ಲಿ ಜನರು ಅಷ್ಟೆ ವಿಜಯೋತ್ಸವ ಆಚರಿಸುವ ಜೊತೆಗೆ ಮಳೆರಾಯನು ಆಗಮಸಿ ಚನ್ನಮ್ಮಾಜಿಯ ವಿಜಯೋತ್ಸವದಲ್ಲಿ ಪಾಲ್ಗೊಂಡು ತಂಪೆರೆದಿದ್ದು ವಿಷೇಶವಾಗಿತ್ತು. ಉಳಿದ ದಿನಗಳಲ್ಲಿ ಸೂರ್ಯನ ಅರ್ಭಟವಿದ್ದರೂ ಉತ್ಸವ ಪ್ರಾರಂಭವಾಯಿತೆಂದರೆ ಮಳೆರಾಯನ ಅರ್ಭಟ ಪ್ರಾರಂಭವಾಗುತ್ತದೆ. ಅದೇ ರೀತಿ ಉತ್ಸವದ ಮೊದಲ ದಿನವೂ ಕೂಡ ವರುಣ ಆಗಮಿಸಿ ತಂಪೆರೆದಿದ್ದಾನೆ.