ಕನ್ನಡಪ್ರಭ ವಾರ್ತೆ ಮುನಿರಾಬಾದ್
ಅಂತಾರಾಷ್ಟ್ರಿಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಮುನಿರಾಬಾದ್‌ನಲ್ಲಿ ಎರಡು ಕಡೆ, ತುಂಗಭದ್ರಾ ಜಲಾಶಯದ ಮೇಲೆ ಹಾಗೂ ಹುಲಿಗಿ ಕ್ರಾಸ್‌ನಿಂದ ಕೊಪ್ಪಳ ಗಡಿಯ ಟಿಬಿ ಡ್ಯಾಂ 2ನೇ ಸೇತುವೆವರೆಗೆ ಮಾನವ ಸರಪಳಿ ನಿರ್ಮಿಸಲಾಯಿತು.ಇತಿಹಾಸ ಪ್ರಸಿದ್ಧ ತುಂಗಭದ್ರಾ ಜಲಾಶಯದ 2 ಕಿಮೀ ಉದ್ದಕ್ಕೆ ನಿರ್ಮಿಸಿದ ಮಾನವ ಸರಪಳಿಯಲ್ಲಿ ಸುಮಾರು 2 ಸಾವಿರ ಜನರು ಭಾಗವಹಿಸಿದ್ದರು. ಮಾನವ ಸರಪಳಿಯಲ್ಲಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಗಿರೀಶ ಮೇಟಿ, ಕಾಡಾ ಅಡಳಿತಾಧಿಕಾರಿ ಸೈಯದ್ ಇಸಾಕ್, ಕನಕಗಿರಿ ತಹಸೀಲ್ದಾರ್ ವಿಶ್ವನಾಥ, ಕ್ಯಾಂಪ್ ಅಫೀಸರ್ ಧರ್ಮರಾಜ, ಸ್ವಾತಂತ್ರ್ಯ ಯೋಧ ಪಿ. ಲಿಂಗಯ್ಯ ಶಾಲೆಯ ಅಧ್ಯಕ್ಷ ಪಿ. ಸಾಂಬಶಿವರಾವ್, ಭಾರತೀಯ ಎಂಜಿನಿಯರ್ ಸಂಸ್ಥೆ ಮುನಿರಾಬಾದ್ ಘಟಕದ ಅಧ್ಯಕ್ಷ ಶಶಿಧರ ಭಾಗವಹಿಸಿದ್ದರು. ಪಿ. ಲಿಂಗಯ್ಯ ಶಾಲೆಯ 600 ವಿದ್ಯಾರ್ಥಿಗಳು, ವಿಜಯನಗರ ಪ್ರೌಢಶಾಲೆಯ 400 ವಿದ್ಯಾರ್ಥಿಗಳು, ಮೌಲಾನಾ ಅಜಾದ್ ಶಾಲೆಯ 200 ವಿದ್ಯಾರ್ಥಿಗಳು, 3 ಶಾಲೆಯ ಶಿಕ್ಷಕರು, ನೀರಾವರಿ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮಾನವ ಸರಪಳಿಗೂ ಮುನ್ನ ಸಂವಿಧಾನ ಪೀಠಿಕೆ ಬೋಧನೆ ಮಾಡಲಾಯಿತು.ಹುಲಿಗಿ ಕ್ರಾಸ್‌ನಿಂದ ಕೊಪ್ಪಳ ಜಿಲ್ಲೆಯ ಗಡಿವರೆಗೆ:
ಇಲ್ಲಿನ ಸಮೀಪದ ಹುಲಿಗಿ ಕ್ರಾಸ್‌ನಿಂದ ಜಿಲ್ಲೆಯ ಸರಹದ್ದಿನ ವರೆಗೆ (ತುಂಗಭದ್ರಾ ನದಿಯ ಮೇಲಿರುವ 2ನೇ ಸೇತುವೆ ವರೆಗೆ) ಮಾನವ ಸರಪಳಿ ನಿರ್ಮಿಸಲಾಯಿತು. ಮಾನವ ಸರಪಳಿಯಲ್ಲಿ 3 ಸಾವಿರಕ್ಕೂ ಅಧಿಕ ಗ್ರಾಮಸ್ಥರು ಸ್ವ ಸಹಾಯ ಗುಂಪಿನ ಸದಸ್ಯರು, ನರೇಗಾ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಭಾರತೀಯ ರಿಸರ್ವ್ ಬಟಾಲಿಯನಿನ 150 ಸಿಬ್ಬಂದಿ, ಕೋರಮಂಡಲ್ ಹಾಗೂ ಎಂಎಸ್‌ಪಿಎಲ್ ಕಾರ್ಖಾನೆಯ 300ಕ್ಕೂ ಅಧಿಕ ಸಿಬ್ಬಂದಿ, ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಮಾರುತಿ ಬಗನಾಳ, ಉಪಾಧಕ್ಷೆ ಲಕ್ಷ್ಮೀ ಭಜಂತ್ರಿ, ಮುನಿರಾಬಾದ್ ಗ್ರಾಪಂ ಅಧ್ಯಕ್ಷ ಅಜೀಜ್ ಖಾನ್, ಉಪಾಧ್ಯಕ್ಷೆ ಸೌಭಾಗ್ಯ, ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.ಮಾನವ ಸರಪಳಿಯಲ್ಲಿ ಹೊಸಹಳ್ಳಿ, ಹಿಟ್ನಾಳ, ಲಿಂಗಾಪುರ, ಮುನಿರಾಬಾದಿನ ಗ್ರಾಮೀಣ ಪ್ರದೇಶದ ಜನರು, ತುಂಬಾ ಉತ್ಸಾಹದಿಂದ ಭಾಗವಹಿಸಿದ್ದರು.