ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಬುಧವಾರ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಸುವರ್ಣಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಮಾಡಿದರು. ಟಿಪ್ಪು ಸುಲ್ತಾನ್ ಕೊಡಗನ್ನು ಆಳ್ವಿಕೆ ಮಾಡುತ್ತಿದ್ದ ಸಂದರ್ಭ ಕೊಡವರು ತಮ್ಮ ಧೈರ್ಯ, ಸಾಹಸದಿಂದ ಟಿಪ್ಪುವನ್ನು ಹಿಮ್ಮೆಟ್ಟಿಸಿದ ನಂತರ ಮೈಸೂರು ಅರಸರು ಮತ್ತು ಕೊಡವ ಜನಾಂಗದೊಂದಿಗೆ ಅವಿನಾಭಾವ ಸಂಬಂಧ ಏರ್ಪಟ್ಟಿತು ಎಂದು ಸಂಸದರು ಸ್ಮರಿಸಿದರು.
ದೇಶಕ್ಕಾಗಿ ಹಾಗೂ ರಾಷ್ಟ್ರೀಯತೆಗಾಗಿ ಸೇವೆ ಮಾಡಿದ ಕೊಡವ ಜನಾಂಗದವರು ಮುಂಬರುವ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾಗಿದ್ದು, ಕೊಡವ ಸಮಾಜದ ಅಭಿವೃದ್ಧಿಗಾಗಿ ತಮ್ಮ ಸಂಸದರ ನಿಧಿಯಿಂದ ಅನುದಾನ ಒದಗಿಸಲು ಬದ್ಧರಾಗಿರುವುದಾಗಿ ತಿಳಿಸಿದರು.ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಚೆಪ್ಪುಡಿರ ಪೂಣಚ್ಚ ಮಾತನಾಡಿ, ಕೊಡವ ಜನಾಂಗ ಚಿಕ್ಕ ಸಮುದಾಯವಾದರೂ ಕ್ರೀಡೆ, ಸೇನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡುವ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೊಡವರ ಸಮಗ್ರ ಅಭಿವೃದ್ಧಿಯಲ್ಲಿ ಕೊಡವ ಸಮಾಜಗಳ ಪಾತ್ರ ಅಪಾರವಾದುದು ಎಂದು ಶ್ಲಾಘಿಸಿದರು.
ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ನಿವೃತ್ತ ಕರ್ನಲ್ ಮರುವಂಡ ತಿಮ್ಮಯ್ಯ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಸಿನಿಮಾ ಕಲಾವಿದ ಆಧ್ಯಾ ಪೂವಣ್ಣ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿದೆ ಪದ್ಮಶ್ರೀ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ವಿದ್ಯುತ್ ಇಲಾಖೆಯ ಮುಖ್ಯ ನಿರೀಕ್ಷಕರಾದ ತೀತಿರ ರೋಷನ್ ಅಪ್ಪಚ್ಚು ಅವರನ್ನು ಸನ್ಮಾನಿಸಲಾಯಿತು. ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ನಿರ್ದೇಶಕರು, ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.