ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಮೆಳೆಕೋಟೆಯ ಧ್ಹಾನ ಪಾಲೇಸ್ನಲ್ಲಿ ಕರ್ನಾಟಕ ಉರ್ದು ಅಕಾಡೆಮಿ, ತೆಹರೀಕ್ ಎ ಉರ್ದು ಆದಬ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿವಸ್ ಮತ್ತು ಉರ್ದು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಥಳೀಯ ಭಾಷೆ ಉಳಿದರೆ ಮಾತ್ರ, ಅಲ್ಲಿನ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ ಎಂದರು.
ಯುವ ಜನಾಂಗ ಜಾಗತಿಕವಾಗಿ ವ್ಯವಹಾರಿಕ ಭಾಷೆಯಾಗಿರುವ ಇಂಗ್ಲಿಷನ ಜೊತೆ, ಸ್ಥಳೀಯವಾಗಿರುವ ಎಲ್ಲಾ ಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡಬೇಕು. ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಜ್ಞಾನ ಸಂಪಾದನೆಗೆ ಸಹಾಯವಾಗಲಿದೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ನೀವು ಉಳಿಯಲು ಸಹಕಾರಿಯಾಗಲಿದೆ. ಅಲ್ಲದೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಭಾಷೆಯ ಕೊರತೆಯಿಂದ ಪ್ರತಿಭೆ ಇದ್ದರೂ ಅವಕಾಶ ವಂಚಿತರಾಗುವ ಸಾಧ್ಯತೆ ಹೆಚ್ಚು. ನಾನು ಚಿಕ್ಕಂದಿನಲ್ಲಿ ಹಿಂದಿ ಕಲಿಯಲಿಲ್ಲ. ಹಿಂದಿ ಗೊತ್ತಿದ್ದರೆ ಇಂದು ರಾಷ್ಟ್ರಮಟ್ಟದ ನಾಯಕನಾಗುವ ಅವಕಾಶವಿತ್ತು. ಹಾಗಾಗಿ ನೀವು ಎಷ್ಟು ಭಾಷೆ ಕಲಿಯುತ್ತೀರೋ, ಅಷ್ಟು ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ ಎಂದು ಸಚಿವ ಯು.ಟಿ.ಖಾದರ್ ನುಡಿದರು.ಸರಕಾರದಲ್ಲಿರುವ ಅಲ್ಪಸಮುದಾಯದ ಮಂತ್ರಿಗಳು, ಶಾಸಕರು ಸೇರಿ ಸ್ಥಗಿತವಾಗಿದ್ದ 550 ಉರ್ದು ಶಿಕ್ಷಕರ ನೇಮಕಕ್ಕೆ ಆದೇಶ ತರಲಾಗಿದೆ. ಸಮಾನತೆಗೆ ಇದು ಒತ್ತು ನೀಡಲಿದೆ. ಸರಕಾರ ಬದಲಾದ ಮಾತ್ರಕ್ಕೆ ಭಾಷೆ ಕಲಿಕೆಗೆ ಅಡ್ಡಿಯಾಗಬಾರದು ಎಂದ ಸಚಿವರು, ಶಿಕ್ಷಣವೊಂದೇ ನಮ್ಮನ್ನು ಶ್ರೀಮಂತರನ್ನಾಗಿಸುವ ಸಾಧನ. ಹಾಗಾಗಿ ಎಲ್ಲರೂ ಶಿಕ್ಷಣದ ಕಡೆಗೆ ಗಮನಹರಿಸಿ, ತಂದೆ ತಾಯಿ ಸಹ ಮಕ್ಕಳನ್ನು ಅರ್ಧಕ್ಕೆ ಶಾಲೆ ಬಿಡಿಸಿ, ದುಡಿಮೆಗೆ ಹಚ್ಚದೆ, ಕೊನೆ ಹಂತ ತಲುಪಿಸಿ, ಅದು ನಿಮ್ಮ ಮೇಲಿರುವ ಜವಾಬ್ದಾರಿ ಎಂದು ಸಲಹೆ ನೀಡಿದರು.
ಜಾಗತೀಕರಣದ ಫಲವಾಗಿ ವಿಶ್ವ ಮಟ್ಟದಲ್ಲಿ ಇಂಗ್ಲಿಷ್, ಭಾರತದ ಮಟ್ಟಿಗೆ ಹಿಂದಿ ವ್ಯವಹಾರಿಕ ಭಾಷೆಯಾದ ಪರಿಣಾಮ ಇತರೆ ಭಾಷೆಗಳಿಗೆ ಹಿನ್ನೆಡೆಯಾಯಿತು. ಕರ್ನಾಟಕದಲ್ಲಿ ಸುಮಾರು 290 ಭಾಷೆಗಳಿದ್ದು, ಕನ್ನಡವನ್ನು ಸುಮಾರು 4 ಕೋಟಿ ಜನರು ಮಾತನಾಡಿದರೆ, ಸುಮಾರು 30 ಲಕ್ಷ ಜನ ಉರ್ದು ಮಾತನಾಡುತ್ತಾರೆ. 10ಲಕ್ಷ ಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಯಲು ಅವಕಾಶ ಕಲ್ಪಿಸಬೇಕಿದೆ. ಅದಕ್ಕಾಗಿಯೇ ಅಭಿವೃದ್ದಿ ಪ್ರಾಧಿಕಾರಿ ಕರ್ನಾಟಕ ಭಾಷಾ ನೀತಿಯನ್ನು ಸರಕಾರದ ಮುಂದಿಟ್ಟಿದೆ. ಅದು ಕಾಯ್ದೆಯಾಗಿ ಬಂದರೆ ಕನ್ನಡ ಸೇರಿದಂತೆ ಕರ್ನಾಟಕದ ಎಲ್ಲಾ ಪ್ರಾದೇಶಿಕ ಭಾಷೆಗಳು ಉಳಿಯಲಿವೆ ಎಂದು ನುಡಿದರು.
ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ಇಂದು ಬಹುತೇಕ ಹೆಣ್ಣು ಮಕ್ಕಳೇ ಶೈಕ್ಷಣಿಕವಾಗಿ ಮುಂದಿದ್ದಾರೆ. ಬಾಲಕರು ಹಿಂದೇ ಉಳಿದಿದ್ದಾರೆ. ಇಂದಿನ ಅಧುನಿಕ ಯುಗದಲ್ಲಿ ಮಹಿಳೆಯರು ತಮ್ಮ ವಿದ್ಯಾರ್ಹತೆ, ಉದ್ಯೋಗಕ್ಕೆ ಸರಿಸಮನಾದ ಗಂಡುಗಳೇ ಬೇಕೆಂದರೆ ಅರ್ಧದಷ್ಟು ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುವುದಿಲ್ಲ. ಹಾಗಾಗಿ ಗಂಡು ಮಕ್ಕಳು ಸಹ ಓದಿನ ಕಡೆಗೆ ಆಸಕ್ತಿ ತೋರಿಸಬೇಕು. ತಂದೆ ತಾಯಿ ಸಹ ಗಂಡು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ತೋರದಂತೆ ಮನವಿ ಮಾಡಿದರು.