ವಿಜ್ಞಾನ, ತಂತ್ರಜ್ಞಾನದ ಮೂಲಬೇರು ಇತಿಹಾಸ: ಡಾ. ಲಕ್ಷ್ಮೀಶ ಹೆಗಡೆ ಸೋಂದಾ

KannadaprabhaNewsNetwork |  
Published : Mar 15, 2026, 02:30 AM IST
ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಂದಾ ಇತಿಹಾಸದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಸೋಂದಾ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಹೆಜ್ಜೆ ಗುರುತುಗಳು ಎಂಬ ವಿಷಯದ ಕುರಿತು ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಖ್ಯಾತ ಇತಿಹಾಸಕಾರ ಡಾ. ಲಕ್ಷ್ಮೀಶ ಹೆಗಡೆ ಸೋಂದಾ ಉಪನ್ಯಾಸ ನೀಡಿದರು.

ಯಲ್ಲಾಪುರ: ಮಾನವನ ದೈನಂದಿನ ಜೀವನದಲ್ಲಿ ಇತಿಹಾಸದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇತಿಹಾಸದ ಅಧ್ಯಯನವು ನಮಗೆ ಒಳ್ಳೆಯ-ಕೆಟ್ಟದ್ದರ ನಡುವಿನ ವ್ಯತ್ಯಾಸ ತಿಳಿಸುತ್ತದೆ. ವಿಜ್ಞಾನದ ಪ್ರತಿ ಆವಿಷ್ಕಾರದ ಹಿಂದೆ ಚಾರಿತ್ರಿಕ ಹಿನ್ನೆಲೆಯಿದೆ ಎಂದು ಖ್ಯಾತ ಇತಿಹಾಸಕಾರರು, ವಾಗ್ಮಿಗಳು, ಬೆಂಗಳೂರಿನ ರಾಯಲ್ ಕಾಲೇಜಿನ ಪ್ರಾಚಾರ್ಯ, ದೆಹಲಿಯ ನ್ಯಾಷನಲ್ ಫೆಲೋಶಿಪ್ ಸಮಿತಿ ಸದಸ್ಯ ಡಾ. ಲಕ್ಷ್ಮೀಶ ಹೆಗಡೆ ಸೋಂದಾ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ, ಪರಂಪರಾ ಕೂಟ ಹಾಗೂ ಮಾತೃಭೂಮಿ ಸೇವಾ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ಸೋಂದಾ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಹೆಜ್ಜೆ ಗುರುತುಗಳು ಎಂಬ ವಿಷಯದ ಕುರಿತು ಶನಿವಾರ ಅವರು ಉಪನ್ಯಾಸ ನೀಡಿದರು. ಇತಿಹಾಸ ಎಂಬುದು ಕೇವಲ ಗತಕಾಲದ ಘಟನೆಗಳಲ್ಲ. ಅದು ಇಂದಿನ ಎಲ್ಲ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಬೇರು. ಇತಿಹಾಸದ ಅಧ್ಯಯನ ಕೇವಲ ಕಲಾ ವಿಭಾಗಕ್ಕೆ ಸೀಮಿತಗೊಳ್ಳದೇ ಎಲ್ಲ ವರ್ಗದವರಿಗೂ ಅನಿವಾರ್ಯವಾಗಿದೆ ಎಂದ ಅವರು, ಸೋಂದಾ (ಸ್ವಾದಿ) ಅರಸರ ಇತಿಹಾಸವು ಕೇವಲ ರಾಜಕೀಯ ಜಯಗಳಷ್ಟೇ ಅಲ್ಲದೆ, ಧರ್ಮ ಮತ್ತು ಸಂಸ್ಕೃತಿಯ ಕೇಂದ್ರವಾಗಿದೆ. ಸೋಂದಾ ಇಂದು ಧಾರ್ಮಿಕ ಪವಿತ್ರತೆಯ ತಾಣವಾಗಿರಲು ಅಂದಿನ ಅರಸರ ದೂರದೃಷ್ಟಿಯೇ ಕಾರಣ. ಸೋಂದಾ ಕೇವಲ ಒಂದು ರಾಜಧಾನಿಯಾಗಿರದೆ, ನಾಲ್ಕು ಪ್ರಮುಖ ಮಠಗಳ ಅಸ್ತಿತ್ವದ ಮೂಲಕ ಧಾರ್ಮಿಕ ಸಾಮರಸ್ಯದ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದರು. ಸೋದೆಯ ಚಾರಿತ್ರಿಕ ವ್ಯಕ್ತಿತ್ವಗಳಾದ ಬೆಳವಡಿ ಮಲ್ಲಮ್ಮ, ಹೆಂಜೆ ನಾಯಕರ ಕುರಿತು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ ಮಾತನಾಡಿ, ಪ್ರತಿಯೊಬ್ಬರಿಗೂ ಇತಿಹಾಸ ಅಧ್ಯಯನ ಅತ್ಯಗತ್ಯ. ಅಂದು ರಾಜರು ನಿರ್ಮಿಸಿದ ಸ್ಮಾರಕಗಳು ಇಂದು ಅವರ ಕೊಡುಗೆಗಳನ್ನು ನಮಗೆ ತಿಳಿಸುತ್ತವೆ ಎಂದರು.

ಇತಿಹಾಸ ವಿಭಾಗದ ಮುಖ್ಯಸ್ಥೆ ಶಾಂತೇರಿ ದಾಮೋದರ ಪೈ ಮಾತನಾಡಿ, ವರ್ತಮಾನದ ಬದುಕನ್ನು ಅರ್ಥ ಮಾಡಿಕೊಳ್ಳಲು ಮತ್ತು ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಇತಿಹಾಸ ದಾರಿದೀಪವಾಗಿದೆ, ಕೈಗನ್ನಡಿಯಾಗಿದೆ ಎಂದರು.

ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಮ್ಮ ಸುತ್ತಮುತ್ತಲಿನ ಸ್ಥಳದ ಚಾರಿತ್ರಿಕ ಹಿನ್ನೆಲೆಯನ್ನು ಅರಿಯುವ ಕುತೂಹಲ ಇರಬೇಕು ಎಂದರು.

ಐಕ್ಯೂಎಸಿ ಸಂಚಾಲಕ ಡಾ. ಓಂಪ್ರಕಾಶ್ ನಾಯ್ಕ, ಮಾತೃಭೂಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ಟ, ಸಂಚಾಲಕ ಸತೀಶ್ ಹೆಬ್ಬಾರ ಉಪಸ್ಥಿತರಿದ್ದರು. ಲಕ್ಷ್ಮಿ ಪಾಂಡ್ರಮೀಸೆ ಪ್ರಾರ್ಥಿಸಿದರು. ದಿವ್ಯಾ ಗೌಡ ಸ್ವಾಗತಿಸಿದರು. ಆಶಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕಾವ್ಯಾ ಕೈಟ್ಕರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಾರವಾರದಲ್ಲಿ ‘ಯುನಿಟಿ ರನ್ ಆ್ಯಂಡ್ ರೈಡ್’
ಧಾರ್ಮಿಕ ಆಚರಣೆಗಳಲ್ಲಿ ಆರೋಗ್ಯ, ಏಕತೆ ಸಂದೇಶ ಅಡಗಿದೆ: ಸಂಗನಗೌಡ ಜಿ. ಪಾಟೀಲ್