ತಾಕತ್ತಿದ್ದರೆ ನಮ್ಮಕೆನ್ನೆಗೆ ಹೊಡೆಯಿರಿ: ಇನಾಯತ್‌ ಆಲಿ ಸವಾಲು

KannadaprabhaNewsNetwork | Published : Jul 12, 2024 1:34 AM

ಸಾರಾಂಶ

ಕಾಂಗ್ರೆಸ್ ಕಾರ್ಯಕರ್ತರು ಕಾವೂರಿನ ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ತಡೆದು ಬಂಧನ ಪ್ರಕ್ರಿಯೆ ನಡೆಸಿದರು. ಪ್ರತಿಭಟನೆಯಿಂದಾಗಿ ಕೆಲವು ಹೊತ್ತು ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು

ಕನ್ನಡಪ್ರಭ ವಾರ್ತೆ ಮಂಗಳೂರುರಾಹುಲ್‌ ಗಾಂಧಿಯನ್ನು ನಿಂದಿಸಿದ ಆರೋಪದಲ್ಲಿ ಗುರುಪುರ ಮತ್ತು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಬುಧವಾರ ಸಂಜೆ ಕಾವೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಹುಲ್ ಗಾಂಧಿಯವರಿಗೆ ಕೆನ್ನೆಗೆ ಹೊಡೆಯುವುದು ಬಿಡಿ ತಾಕತ್ತಿದ್ದರೆ ನಮ್ಮಂತಹ ಸಾಮಾನ್ಯ ಕಾರ್ಯಕರ್ತರ ಮೈಮುಟ್ಟಿ ನೋಡಲಿ. ನಾವು ಬಿಜೆಪಿ ಕಚೇರಿಗೆ ಬರುತ್ತೇವೆ ನೀವು ನಮ್ಮ ಕೆನ್ನೆಗೆ ಹೊಡೆಯಿರಿ ಎಂದು ಸವಾಲು ಹಾಕಿದರು. ಕಾಂಗ್ರೆಸ್‌ ಮುಖಂಡ ಎಂ.ಜಿ. ಹೆಗಡೆ ಮಾತಾಡಿ, ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವ ಭರತ್ ಶೆಟ್ಟಿ ಅವರು ಕಾರ್ಯಕರ್ತರನ್ನು ಖುಷಿ ಪಡಿಸಲು ಈ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಕಾರ ಬಿಜೆಪಿಯದ್ದು ಮಾತ್ರ ಅಸಲಿ ಹಿಂದುತ್ವ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಿಂದುಗಳೇ ಇಲ್ಲ. ನಾವೂ ಹಿಂದೂಗಳು ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕುತ್ತಿದ್ದೇವೆ ಎಂದರು.ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ನೀವು ಇದೇ ರೀತಿ ಹೇಳಿಕೆ ಕೊಡುತ್ತ ಬಂದರೆ ನಾವು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ನಿಮಗೆ ಚಪ್ಪಲಿ ಸೇವೆ ಮಾಡುತ್ತೇವೆ, ಎಚ್ಚರಿಕೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾವೂರಿನ ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ತಡೆದು ಬಂಧನ ಪ್ರಕ್ರಿಯೆ ನಡೆಸಿದರು. ಪ್ರತಿಭಟನೆಯಿಂದಾಗಿ ಕೆಲವು ಹೊತ್ತು ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು.ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಶಶಿಧರ್ ಶೆಟ್ಟಿ, ರಾಜೇಶ್ ಕುಳಾಯಿ, ರೆಹಮಾನ್ ಖಾನ್, ಗಿರೀಶ್ ಆಳ್ವ ಮತ್ತಿತರರು ಇದ್ದರು.

Share this article