ಕನ್ನಡಪ್ರಭ ವಾರ್ತೆ ಮೈಸೂರು
ದಾಖಲೆಗಳು ಇತಿಹಾಸದ ಮೂಲಾಧಾರವಾಗಿದ್ದು, ಅವುಗಳ ಮಹತ್ವ ಅರಿಯುವುದರ ಜೊತೆಗೆ ಸಂರಕ್ಷಣೆಯ ಹೊಣೆ ಕೂಡ ನಮ್ಮೆಲ್ಲರದು ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಮೈಸೂರು ವಿಭಾಗೀಯ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್. ಮಂಜುನಾಥ ತಿಳಿಸಿದರು.ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪತ್ರಾಗಾರ ಸಪ್ತಾಹದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ದಾಖಲೆಗಳ ಮಹತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರು ಪ್ರಜಾಪ್ರತಿನಿಧಿ ಸಭೆ ಸ್ಥಾಪನೆಯ ನಡಾವಳಿಗಳು, ಮೈಸೂರು ರಾಜ್ಯ ಸ್ಥಾಪನೆ, ಕರ್ನಾಟಕ ಏಕೀಕರಣ ಚಳವಳಿ, ಮೈಸೂರು ಚಲೋ ಚಳವಳಿ ಮುಂತಾದ ಐತಿಹಾಸಿಕ ಘಟನಾವಳಿಗಳ ದಾಖಲೆಗಳನ್ನು ಮುಂದಿನ ಪೀಳಿಗೆಯವರಿಗೂ ತಲುಪಿಸುವ ನಿಟ್ಟಿನಲ್ಲಿ ಪತ್ರಾಗಾರ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಪ್ರಸ್ತುತಿಯ ಮೂಲಕ ಅವರು ಸವಿವರವಾಗಿ ತಿಳಿಸಿದರು.ಪತ್ರಾಗಾರ ಇಲಾಖೆಯು ಇದುವರೆಗೂ ಒಟ್ಟು 1.20 ಕೋಟಿ ಪುಟಗಳ ದಾಖಲೆಗಳನ್ನು ಗಣಕೀಕರಣ ಮೂಲಕ ತಮ್ಮ ವೆಬ್ ಸೈಟ್ ನಲ್ಲಿ ಅಳವಡಿಸಿದೆ. ಈ ದಾಖಲೆಗಳನ್ನು ಅಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಜನಸಾಮಾನ್ಯರು ಸಹ ವೀಕ್ಷಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪೂರ್ಣ ಪ್ರಮಾಣದಲ್ಲಿ ಈ ಪತ್ರಾಗಾರಗಳ ಉಪಯೋಗವನ್ನು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದಾಖಲೆಗಳನ್ನು ಸಂರಕ್ಷಿಸುತ್ತಿರುವ ರಾಜ್ಯ ಪತ್ರಾಗಾರ ಇಲಾಖೆಯ ಪಾತ್ರ ಗಣನೀಯವಾದದ್ದು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಮಾತನಾಡಿ, ದಾಖಲಾತಿಯು ಅತ್ಯಂತ ಮಹತ್ವವಾದದ್ದು, ವಿದ್ಯಾರ್ಥಿ ದಿಸೆಯಿಂದಲೇ ಅಧಿಕೃತ ದಾಖಲೆಗಳ ಸಂಗ್ರಹ ಮಾಡುವ ಮತ್ತು ಅವುಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿನಿ ಎಂ. ಪ್ರೀತಿ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎ.ಜಿ. ಧರ್ಮೇಶ ಸ್ವಾಗತಿಸಿದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಆರ್. ಸುಜಾತಾಕುಮಾರಿ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸುವರ್ಣ ಕಂಬಿ ವಂದಿಸಿದರು.