7ರಿಂದ ಹೊದ್ದೂರು ಶ್ರೀ ಭಗವತಿ ದೇವಾಲಯ ಬ್ರಹ್ಮಕಲಶೋತ್ಸವ

KannadaprabhaNewsNetwork |  
Published : Mar 06, 2024, 02:16 AM IST
ಹೊದ್ದೂರು  ಶ್ರೀ ಭಗವತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ  ಚೌರೀರ.ಕೆ.ಮೇದಪ್ಪ, ದೇವಾಲಯದ ತಕ್ಕ ಮುಖ್ಯಸ್ಥರೂ,ಕಾರ್ಯದರ್ಶಿಯೂ ಆಗಿರುವ ನೆರವಂಡ ಸಂಜಯ್ ಪೂಣಚ್ಚ, ಜೀರ್ಣೋದ್ಧಾರ ಸಮಿತಿ ಸದಸ್ಯ ಚೌರೀರ ಉದಯ ಹಾಗೂಸಮಿತಿ ಸದಸ್ಯರು. | Kannada Prabha

ಸಾರಾಂಶ

ಹೊದ್ದೂರು ಶ್ರೀ ಭಗವತಿ ದೇವಾಲಯವು ಶಿಥಿಲಾವಸ್ಥೆ ಯಲ್ಲಿದ್ದುದರಿಂದ ಗ್ರಾಮಸ್ಥರು ಪುನರ್ ನಿರ್ಮಾಣಕ್ಕೆ ಮುಂದಾಗಿ ಇದೀಗ ಸುಂದರ ಶಿಲಾಮಯ ದೇವಾಲಯ ನಿರ್ಮಾಣಗೊಂಡಿದೆ. ಮಾ.13ರಂದು ಬೆಳಗ್ಗೆ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ ,ನಾಗ ಪ್ರತಿಷ್ಠೆ, ಬ್ರಹ್ಮ ಕಳಶ ಪೂಜೆ ಮತ್ತಿತರ ವೈದಿಕ ಕಾರ್ಯಕ್ರಮಗಳು ಜರುಗಲಿವೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಮಾ.7ರಿಂದ 14ರ ತನಕ ನಡೆಯಲಿದೆ ಎಂದು ದೇವಾಲಯದ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚೌರೀರ ಕೆ.ಮೇದಪ್ಪ ತಿಳಿಸಿದ್ದಾರೆ. ದೇವಾಲಯದ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಶ್ರೀ ಭಗವತಿ ದೇವಾಲಯವು ಶಿಥಿಲಾವಸ್ಥೆ ಯಲ್ಲಿದ್ದುದರಿಂದ ಗ್ರಾಮಸ್ಥರು ಪುನರ್ ನಿರ್ಮಾಣಕ್ಕೆ ಮುಂದಾಗಿ ಇದೀಗ ಸುಂದರ ಶಿಲಾಮಯ ದೇವಾಲಯ ನಿರ್ಮಾಣಗೊಂಡಿದೆ. ಮಾ.13ರಂದು ಬೆಳಗ್ಗೆ 8ರಿಂದ 10 ಗಂಟೆ ಒಳಗಿನ ಮೇಷಲಗ್ನ, ಶುಕ್ಲ ಪಕ್ಷ, ಚತುರ್ಥ ತಿಥಿ ಸುಮುಹೂರ್ತದಲ್ಲಿ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ ,ನಾಗ ಪ್ರತಿಷ್ಠೆ, ಬ್ರಹ್ಮ ಕಳಶ ಪೂಜೆ ಮತ್ತಿತರ ವೈದಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ದೇವಾಲಯದ ತಕ್ಕ ಮುಖ್ಯಸ್ಥ, ಕಾರ್ಯದರ್ಶಿ ನೆರವಂಡ ಸಂಜಯ್ ಪೂಣಚ್ಚ ಮಾತನಾಡಿ, ಗ್ರಾಮದ ಪುರಾತನ ದೇವಾಲಯವಿದು. 2013 ರಲ್ಲಿ ಜೀರ್ಣೋಧ್ಧಾರ ಮಾಡುವಂತೆ ತೀರ್ಮಾನಿಸಲಾಯಿತು. 2018ರಲ್ಲಿ ಸ್ವರ್ಣ ಪ್ರಶ್ನೆ ಇಡಲಾಯಿತು. 1.50 ಕೋಟಿ ರು.ವೆಚ್ಚದಲ್ಲಿ ಸುಂದರ ದೇವಾಲಯ ನಿರ್ಮಾಣಗೊಂಡಿದೆ. ಇನ್ನೂ ಸುಮಾರು 30 ಲಕ್ಷ ರು.ಅಗತ್ಯವಿದೆ ಎಂದರು.

ಜೀರ್ಣೋದ್ಧಾರ ಸಮಿತಿ ಸದಸ್ಯ ಚೌರೀರ ಉದಯ ಮಾತನಾಡಿ, ಈ ಹಿಂದೆ ದೇವಾಲಯದ ಜೀರ್ಣೋದ್ಧಾರ ನಡೆದಿದ್ದರೂ ಶಾಸ್ತ್ರೋಕ್ತವಾಗಿ ಆಗಿರಲಿಲ್ಲ. ಮರಕಡ ಶ್ರೀ ಗುರ ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೇಶ್ವರ ಸ್ವಾಮೀಜಿ ಪೂರ್ಣ ಅನುಗ್ರಹದೊಂದಿಗೆ ನಿತಿನ್ ನರೇಂದ್ರನಾಥ ಯೋಗೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮ ಮಾರ್ಗದರ್ಶನದಲ್ಲಿ, ದಾನಿಗಳ ನೆರವಿನಿಂದ ದೇವಾಲಯ ನಿರ್ಮಾಣಗೊಂಡಿದೆ. ಕೊರೋನ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ ತಡವಾಗಿದೆ ಎಂದರು.

7ರಂದು ಕುತ್ತಿಪೂಜೆ:

ಮಾ.7ರಂದು ಕುತ್ತಿ ಪೂಜೆಯೊಂದಿಗೆ ಆರಂಭಗೊಳ್ಳಲಿರುವ ಬ್ರಹ್ಮಕಲಶೋತ್ಸವಕ್ಕೆ ಮಾ.8ರಂದು ತಂತ್ರಿಯವರು ಆಗಮಿಸಿ, ವಾಸ್ತು ಕಲಶ ಪೂಜೆ, ವಾಸ್ತು ಬಲಿ ನೆರವೇರಿಸಲಿದ್ದಾರೆ. 9ರಂದು ಸಂಜೆ 5ರಿಂದ ಅಂಕುರ ಆರೋಹಣ, ವಿಗ್ರಹ ಪರಿಗ್ರಹ ದೀಪಾ ಆರಾಧನೆ ನಡೆಯಲಿದೆ. 10ರಂದು ಸಂಜೆ 6ರಿಂದ ದೀಪಾರಾಧನೆ, ಅಂಕುರ ಪೂಜೆ, ತ್ರಿಕಾಲ ಪೂಜೆ ನಡೆಯಲಿದೆ. 11ರಂದು ಬೆಳಗ್ಗೆ ಗಣಪತಿ ಹೋಮ, ಸಂಜೆ ಅನುಜ್ಞಾ ಬಲಿ ಹಾಗೂ ಅನುಜ್ಞಾ ಪ್ರಾರ್ಥನೆ ಗ್ರಾಮಸ್ಥರಿಂದ ನೆರವೇರಲಿದೆ ಎಂದರು.12ರಂದು ಸಂಜೆ 4ಕ್ಕೆ ಜಲೋದ್ಧಾರ ಬಿಂಬಶುದ್ಧಿ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಲಿವೆ. 13ರಂದು ಬೆಳಗ್ಗೆ 8ರಿಂದ 10ರೊಳಗೆ ಮೇಷಲಗ್ನ, ಶುಕ್ಲ ಪಕ್ಷ, ಚತುರ್ಥ ತಿಥಿ ಸುಮುಹೂರ್ತದಲ್ಲಿ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ ,ನಾಗ ಪ್ರತಿಷ್ಠೆ, ಬ್ರಹ್ಮ ಕಲಶ ಪೂಜೆ ಮತ್ತಿತರ ವೈದಿಕ ಕಾರ್ಯಕ್ರಮಗಳು ಜರುಗಲಿವೆ. 14ರಂದು ಸಂಜೆ ಮೂರು ಗಂಟೆಗೆ ದೇವರ ನೃತ್ಯಬಲಿ ಜರುಗಲಿದೆ ಎಂದು ಮಾಹಿತಿ ನೀಡಿದರು.ಭಗವತಿ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಬ್ರಹ್ಮಕಲಶ ಮತ್ತು ವೈದಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಕೆ.ಯು ಪದ್ಮನಾಭ ತಂತ್ರಿ ಹಾಗೂ ದೇವಸ್ಥಾನದ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಜರುಗಲಿವೆ. ಪ್ರತಿ ದಿನ ವೈದಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ದೇವಾಲಯದ ಜೀರ್ಣೋದ್ಧಾರ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.ಸಮಿತಿ ಸದಸ್ಯರಾದ ನೆರವಂಡ ಚರ್ಮಣ, ಮಂಡೆಪಂಡ ರಮೇಶ್, ಮುಂಡೋಟಿರ ಸೋಮಯ್ಯ, ವಾಂಚೀರ ಅಜಯ್ , ಎ.ಪಿ.ಪೂಣಚ್ಚ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ