ಕಾರಟಗಿ: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಿದ ಎಡವಟ್ಟಿನಿಂದ ಪೀಠೋಪಕರಣ ಜಪ್ತಿ ಮಾಡಿಸಿಕೊಳ್ಳುವ ಪರಿಸ್ಥಿತಿಗೆ ಕಾರಟಗಿ ವಿಶೇಷ ಎಪಿಎಂಸಿ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಕನಸಿನ ಕೂಸು ರೈಸ್ ಟೆಕ್ ಪಾರ್ಕ್‌ನ ಸಂಬಂಧ ಭೂಮಿ ಕೊಟ್ಟ ರೈತರು ನ್ಯಾಯಾಲಯದ ಮೆಟ್ಟಿಲು ಏರಿ ವಿಶೇಷ ಎಪಿಎಂಸಿಯ ಪೀಠೋಪಕರಣ ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧ ಸಚಿವರು ಪ್ರತಿಕ್ರಿಯಿಸಿದರು.
ಮಹತ್ವಕಾಂಕ್ಷಿ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಾಣಕ್ಕೆ ಅಂದು ರೈತರೇ ಸ್ವಇಚ್ಛೆಯಿಂದ ಭೂಮಿ ನೀಡಿದ್ದಾರೆ. ನಾವು ಅವರಿಂದ ಭೂಮಿ ವಶಪಡಿಸಿಕೊಂಡಿಲ್ಲ. ಒಂದೇ ಬಾರಿಗೆ ಹಣ ಸಂದಾಯ ಮಾಡುವಂತೆ ರೈತರು ಬಾಂಡ್ ಬರೆದುಕೊಟ್ಟು ಸರ್ಕಾರಕ್ಕೆ ಭೂಮಿ ನೀಡಿದ್ದಾರೆ. ಅಂತೆಯೇ ರೈತರಿಗೆ ಹಣ ಸಂದಾಯ ಮಾಡಲಾಗಿದೆ. ಇನ್ನು ಹೆಚ್ಚಿನ ಪರಿಹಾರ ನಾವು ಕೇಳುವುದಿಲ್ಲ ಎಂದು ಸ್ವತಃ ರೈತರೇ ಬಾಂಡ್ ಬರೆದುಕೊಟ್ಟಿದ್ದಾರೆ ಎಂದ ಸಚಿವ ತಂಗಡಗಿ, ರೈತರು ಬರೆದುಕೊಟ್ಟ ಬಾಂಡ್‌ಗಳು ಹಾಗೂ ದಾಖಲೆಗಳನ್ನು ಬಿಜೆಪಿ ಸರ್ಕಾರ ಅಂದು ಸಲ್ಲಿಕೆ ಮಾಡಿದ್ದರೆ ಇಂದು ಈ ಸಮಸ್ಯೆ ಬರುತ್ತಿರಲಿಲ್ಲ. ಈಗ ನಾನು ಎಪಿಎಂಸಿ ನಿರ್ದೇಶಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಿ ವಾಸ್ತವಿಕತೆ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಸಂತ್ರಸ್ತರಿಗೆ ನಿವೇಶನ: ಪಟ್ಟಣದ ಗ್ರಾಮ ದೇವತೆ ದ್ಯಾವಮ್ಮದೇವಿ ದೇವಸ್ಥಾನದ ಬಳಿಯ ನಿವಾಸಿ ಹಾಗೂ ಸುಂಕಲ ವೀರಪ್ಪನ ಪುಷ್ಕರಣಿ ಬಳಿಯ ನಿವಾಸಿಗಳಿಗೆ ಹೊರವಲಯದ ದೇವಿ ಕ್ಯಾಂಪ್‌ನಲ್ಲಿ ನಿವೇಶನ ನೀಡಲಾಗುವುದು.
ಪಟ್ಟಣದ ಸರ್ವ ಸಮಾಜದವರು ದೇವಸ್ಥಾನ ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ದೇವಸ್ಥಾನ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಬೇಗ ನಿಮ್ಮ ಮನೆಗಳನ್ನು ಖಾಲಿ ಮಾಡಿದಲ್ಲಿ ದೇವಸ್ಥಾನ ನಿರ್ಮಾಣದ ಕಾರ್ಯಕ್ಕೆ ವೇಗ ಸಿಗಲಿದೆ. ತಕ್ಷಣ ಮನೆ ಖಾಲಿ ಮಾಡಿ ಎಂದರೆ ಹೇಗೆ ಒಂದು ತಿಂಗಳ ಕಾಲಾವಕಾಶ ನೀಡುವಂತೆ ನಿವಾಸಿಗಳು ಇದೇ ವೇಳೆ ಮನವಿ ಮಾಡಿಕೊಂಡರು.
ಇನ್ನು ದೇವಿಕ್ಯಾಂಪ್ ಪ್ರದೇಶದಲ್ಲಿ ಕೆಲವು ಬಲಾಡ್ಯರು ಅಕ್ರಮವಾಗಿ ನಿವೇಶನ ಅಕ್ರಮಿಸಿಕೊಂಡು ಬಡವರಿಗೆ ಬಾಡಿಗೆ ನೀಡುತ್ತಿದ್ದಾರೆ. ಅಂಥ ಬಡ ಕುಟುಂಬಗಳ ಪಟ್ಟಿ ತಯಾರಿಸಿ,ಆ ಸ್ಥಳದಲ್ಲಿ ಯಾರು ವಾಸ ಮಾಡುತ್ತಿದ್ದಾರೋ ಅವರ ಹೆಸರಿನಲ್ಲೇ ಹಕ್ಕು ಪತ್ರ ನೀಡಲು ಅಧಿಕಾರಿಗಳಿಗೆ ಖಡಕ್ಕಾಗಿ ಆದೇಶಿಸಿದರು. ಈ ವೇಳೆ ಕಾರಟಗಿ ಕಾಂಗ್ರೆಸ್ ಮುಖಂಡರು, ಪುರಸಭೆ ಸದಸ್ಯರು ಇದ್ದರು.