ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಅದ್ದೀಹಳ್ಳಿ ಸರ್ಕಲ್‌ನ ಸರ್ಕಾರಿ ಶಾಲೆಯಲ್ಲಿ ನೂತನವಾಗಿ ತೆರೆದಿರುವ ಕೂಸಿನ ಮನೆಯನ್ನು ಉದ್ಘಾಟಿಸಿದ ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ದೇಶದ ಸಂವಿಧಾನಕ್ಕೆ ಗೌರವ ಕೊಡದ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಕೊಟ್ಟಿರುವ ತೀರ್ಮಾನ ಇಷ್ಟವಾಗದೆ ಈ ಕೆಲಸ ಮಾಡುತ್ತಿದ್ದಾರೆ.ಇವರಿಗೆ ಜಿಲ್ಲೆಯ ಜನ ಬುದ್ಧಿ ಕಲಿಸುತ್ತಾರೆ ಎಂದು ಮಾಜಿ ಸಿಎಂ ಎಚ್ಡಿಕೆ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್ ವಿರುದ್ಧ ಕಿಡಿಕಾರಿದರು.
ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿ ಚುನಾವಣಾ ರಾಜಕಾರಣ ಮಾಡುತ್ತಿರುವ ಇವರ ಕ್ರಮವನ್ನು ಜಿಲ್ಲೆಯ ಜನತೆಯ ಪರವಾಗಿ ಖಂಡಿಸುತ್ತೇನೆ. ಜಿಲ್ಲೆಯಲ್ಲಿ ಇಂತಹ ವಿಚಾರಗಳನ್ನು ಬಿತ್ತಿ, ಕಟ್ಟಡಗಳ ಮತ್ತು ಬ್ಯಾನರ್‌ಗಳ ಮೇಲೆ ಕಲ್ಲು ಹಾಕುವ ಮೂಲಕ ಕಾನೂನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಎರಡು ದಿನಗಳ ಕಾಲ ಬಹಳ ಕೆಟ್ಟದಾಗಿ ನಡೆದುಕೊಂಡು ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡಲು ಬಂದಿದ್ದಾರೆಯೇ ವಿನಃ ಬೇರೇನೂ ಇಲ್ಲ. ಕೆರಗೋಡಿನಲ್ಲಿ ಹನುಮಧ್ವಜ ಹಾರಿಸಿರುವ ಯುವಕರ ಬಗ್ಗೆ ನಮಗೆ ಇಂದಿಗೂ ಗೌರವವಿದೆ. ಅವರೊಂದಿಗೆ ಕುಳಿತು ಮಾತನಾಡಿ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಲು ನಾವೂ ಸಹ ಸಿದ್ಧರಿದ್ದೇವೆ ಎಂದರು.ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಹತಾಶರಾಗಿರುವ ಜೆಡಿಎಸ್ ನಾಯಕರು ಜಾತ್ಯಾತೀತ, ರೈತರ ಪರ, ನೀರಾವರಿ ಪರ, ಅಭಿವೃದ್ಧಿಪರ ಎನ್ನುತ್ತಿದ್ದರು. ಸದ್ಯ ಯಾವುದೇ ಅವಕಾಶಗಳು ಸಿಗದಿದ್ದಾಗ ಬಿಜೆಪಿ ಪಕ್ಷದೊಂದಿಗೆ ನಿಂತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಬುದ್ಧಿವಂತರಾಗಿರುವುದಕ್ಕೆ ಸುಮ್ಮನಿದ್ದಾರೆ. ಆರ್. ಅಶೋಕ್ ಭಾನುವಾರ ಬಂದು ಹೋಗಿ ಕೈತಪ್ಪಿಸಿಕೊಂಡಿದ್ದಾರೆ. ಆದರೆ, ಜೆಡಿಎಸ್ ನಾಯಕರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವುದು ದುರಂತವೇ ಸರಿ ಎಂದು ಮಾಜಿ ಸಿಎಂ ಎಚ್ಡಿಕೆಯವರನ್ನು ಜರಿದರು.
ಹನುಮ ಮತ್ತು ಶ್ರೀರಾಮನ ಬಗ್ಗೆ ಅವರಿಗಿಂತಲೂ ನಮಗೆ ಅಪಾರ ಭಕ್ತಿ, ಗೌರವವಿದೆ. ನಾವೂ ಮೇಲುಕೋಟೆಯ ಚಲುವನಾರಾಯಣಸ್ವಾಮಿಯನ್ನು ಪೂಜಿಸುವವರು. ಕೆರಗೋಡು ಗ್ರಾಪಂನ ಸಭಾ ನಡವಳಿಯಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸುವುದಕ್ಕೆ ಮಾತ್ರ ಅವಕಾಶ ಎಂದು ಅನುಮೋದಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಅದರಲ್ಲೂ ವಿಶೇಷ ದಿನಗಳಲ್ಲಿ ಮಾತ್ರ ರಾಷ್ಟ್ರಧ್ವಜ ಹಾರಿಸಲು ಕಾನೂನಿನಲ್ಲಿ ಅವಕಾಶವಿದೆ. ಕಾರಣಾಂತರದಿಂದ ಆ ಸ್ಥಳದಲ್ಲಿ ಹನುಮಧ್ವಜ ಹಾರಿಸಿರುವ ಅಲ್ಲಿನ ಯುವಕರು, ಖಾಸಗಿ ಜಾಗದಲ್ಲಿ ಹನುಮ ಧ್ವಜ ಹಾರಿಸುತ್ತೇವೆ. ಇಲ್ಲಿ ರಾಷ್ಟ್ರಧ್ವಜ ಹಾರಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಮಾತನಾಡಿದ್ದಾರೆ. ಸ್ಥಳೀಯ ಶಾಸಕರು, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ರಾಷ್ಟ್ರಧ್ಜಜಾರೋಹಣ ಮಾಡಿದ್ದಾರೆ. ಆದರೂ ಇವರ ಉದ್ದೇಶವೇನು? ರಾಷ್ಟ್ರಧ್ವಜದ ವಿರುದ್ಧವಾಗಿದ್ದಾರೋ ಅಥವಾ ರಾಷ್ಟ್ರಧ್ವಜವನ್ನು ಇಳಿಸಬೇಕೆಂದು ಬಂದಿದ್ದಾರೋ ನಮಗೆ ಅರ್ಥವಾಗುತ್ತಿಲ್ಲ ಎಂದರು.