ನಾಪತ್ತೆಯಾಗಿದ್ದ ಹೊಳಲ್ಕೆರೆ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆ

KannadaprabhaNewsNetwork | Published : Aug 22, 2024 12:54 AM

ಸಾರಾಂಶ

ಬುಧವಾರ ಮುಂಜಾನೆ ನಾಪತ್ತೆಯಾಗಿದ್ದ ಹೊಳಲ್ಕೆರೆಯ ಡ್ರೀಮ್ ವರ್ಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್ ನ 10 ನೇ ತರಗತಿ ಓದುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಸಂಜೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ಪೋಷಕರ ಆತಂಕ ನಿವಾರಣೆಯಾಗಿದೆ.

ಕನ್ನಡಪ್ರಭವಾರ್ತೆ ಹೊಳಲ್ಕೆರೆಬುಧವಾರ ಮುಂಜಾನೆ ನಾಪತ್ತೆಯಾಗಿದ್ದ ಹೊಳಲ್ಕೆರೆಯ ಡ್ರೀಮ್ ವರ್ಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್ ನ 10 ನೇ ತರಗತಿ ಓದುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಸಂಜೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ಪೋಷಕರ ಆತಂಕ ನಿವಾರಣೆಯಾಗಿದೆ.ರೆಸಿಡೆನ್ಸಿ ಶಾಲೆಯಲ್ಲಿ 10 ನೇ ತರಗತಿಯ 19 ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿದ್ದು ಅದರಲ್ಲಿ 10 ಮಂದಿ ವಿದ್ಯಾರ್ಥಿನಿಯರಿದ್ದರು. ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಶಾಲೆ ಕಾಂಪೌಂಡ್ ಹಾರಿ ಎಂಟು ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. ಅದರಲ್ಲಿ ಇಬ್ಬರು ಮಾತ್ರ ಮರಳಿ ಶಾಲೆಗೆ ಬಂದಿದ್ದು ಉಳಿದವರು ಎಲ್ಲಿಗೆ ಹೋದರೆಂಬುದೇ ಗೊತ್ತಿರಲಿಲ್ಲ. ಶಾಲಾ ಮುಖ್ಯೋಪಾಧ್ಯಾಯರಿಗೂ ಮಧ್ಯಾಹ್ನದವರೆಗೆ ವಿದ್ಯಾರ್ಥಿಗಳು ನಾಪತ್ತೆಯಾದ ಸಂಗತಿ ಗಮನಕ್ಕೆ ಬಂದಿರಲಿಲ್ಲ. ಆಗ ಪೋಷಕರು ಪೊಲೀಸರನ್ನು ಸಂಪರ್ಕಿಸಿದ್ದಾರೆ.ಸಂಜೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರಿನ ಪೀಣ್ಯಾ ಬಡಾವಣೆಯ ಶ್ವೇತಾ ಎಂಬುವರ ಮನೆಯಲ್ಲಿ ವಿದ್ಯಾರ್ಥಿಗಳು ಪತ್ತೆಯಾಗಿದ್ದು, ವಿದ್ಯಾರ್ಥಿ ಶ್ರೇಯಸ್ ಸೋದರ ಅತ್ತೆಯಾಗಿರುವ ಶ್ವೇತಾ ಅವರ ನಿವಾಸ ಇದಾಗಿದೆ. ಶ್ವೇತಾ ಅವರು ಶ್ರೇಯಸ್ ತಂದೆ ಸಂಪರ್ಕಿಸಿ ವಿಷಯ ಮುಟ್ಟಿಸಿದಾಗ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.ವಿಷಯ ತಿಳಿದ ಕೂಡಲೇ ಶಾಲೆಗೆ ಆಗಮಿಸಿದ ತಹಸೀಲ್ದಾರ್ ಫಾತಿಮಾ, ಶಾಲೆಯ ವ್ಯವಸ್ಥೆ ಕುರಿತು ಮಕ್ಕಳಿಂದ ಮಾಹಿತಿ ಪಡೆದರು. ನಂತರ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿ ಸುರಕ್ಷಿತವಾಗಿರುವ ಬಗ್ಗೆ ಖಚಿತ ಪಡಿಸಿಕೊಂಡರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ಫಾತಿಮಾ, ಒಟ್ಟು ಎಂಟು ಮಕ್ಕಳು ಶಾಲೆಯಿಂದ ಹೊರಗಡೆ ಹೋಗುವ ಪ್ಲಾನ್ ಮಾಡಿಕೊಂಡಿದ್ದರು. ಅದರಲ್ಲಿ ಇಬ್ಬರು ಮಕ್ಕಳು ಭಯದಿಂದ ಹೊರಗೆ ಹೋಗಲು ಆಗಿಲ್ಲ. ಉಳಿದ ಆರು ಮಕ್ಕಳು ಶಾಲೆಯಿಂದ ಬೆಳಗಿನ ಜಾವ ಹೋಗಿದ್ದರು. ಮಕ್ಕಳು ಶಾಲೆಯನ್ನು ಬಿಟ್ಟು ಹೋಗಲು ಓದಿನ ಒತ್ತಡ ಕಾರಣ ಎಂದು ತಿಳಿದು ಬಂದಿದೆ. ಗೈರು ಹಾಜರಾದ್ರೆ ಅತೀ ಕ್ರೂರವಾಗಿ ದಂಡನೆ ವಿಧಿಸುವ ಕ್ರಮ ಶಾಲೆಯಲ್ಲಿದೆ. ಇದು ಮಕ್ಕಳ ಮನಸ್ಸಿನಲ್ಲಿ ಆಘಾತ ಉಂಟು ಮಾಡಿದೆ ಎಂದರು.ಸರ್ಕಾರದ ಯಾವುದೇ ಅನುಮತಿ ಪಡೆಯದೇ ಹಾಸ್ಟೆಲ್ ನಡೆಸಲಾಗ್ತಿದೆ. ಊಟ ಕೂಡ ಸರಿ ಇರಲ್ಲ ಎಂದು ಪೋಷಕರು ನನಗೆ ದೂರು ಸಲ್ಲಿಸಿದ್ದಾರೆ. ಶಾಲೆಯ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕು ಎಂದು ಬಿಇಓ ಗೆ ನಿರ್ದೇಶನ‌‌ ಕೊಡಲಾಗಿದೆ. ನಂತರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದು. ಆರು ವಿದ್ಯಾರ್ಥಿಗಳು ಸದ್ಯ ಬೆಂಗಳೂರಿನ ರಿಲೇಷನ್ ಮನೆಯಲ್ಲಿ ಪತ್ತೆಯಾಗಿದ್ದಾರೆ. ವಿಡಿಯೋ ಕಾಲ್ ಮೂಲಕ ಮಾತನಾಡಿದ್ದೀನಿ. ಎಲ್ಲರ‌ ಯೋಗ ಕ್ಷೇಮ ವಿಚಾರಿದ್ದೀನಿ ಎಲ್ಲರೂ ಸುರಕ್ಷಿತವಾಗಿ ಇದ್ದಾರೆ ಎಂದರು.

Share this article