ಭವಿಷ್ಯದ ಬದುಕಿನ ಯಶಸ್ಸಿಗೆ ಪರಿಶ್ರಮ ಮುಖ್ಯ: ಗೀತಾಂಜಲಿ ತೆಪ್ಪದ

KannadaprabhaNewsNetwork | Published : Aug 22, 2024 12:54 AM

ಸಾರಾಂಶ

ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮಕ್ಕಳಿಗಾಗಿ ರಕ್ಷೆಯಾಗೋಣ ಎಂಬ ವಿನೂತನ ಕಾರ್ಯಕ್ರಮ, ವಿಶೇಷ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.

ಶಿಗ್ಗಾಂವಿ: ತಂದೆ, ತಾಯಿ ಹಾಗೂ ಗುರುಗಳ ಮಾರ್ಗದರ್ಶನ ನಮ್ಮ ನಾಳೆಗಳ ಬದುಕನ್ನು ಗಟ್ಟಗೊಳಿಸಲು ಕಾರಣವಾಗಿವೆ. ಬದುಕಿನ ಯಶಸ್ಸಿಗೆ ನಾಳೆ ನಮ್ಮದೆ ಎಂಬ ಚಿಂತನೆಗಳು ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ ಹೇಳಿದರು.

ತಾಲೂಕಿನ ಹಿರೇಮಣಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ಮಕ್ಕಳಿಗಾಗಿ ರಕ್ಷೆಯಾಗೋಣ ಎಂಬ ವಿನೂತನ ಕಾರ್ಯಕ್ರಮ ಹಾಗೂ ವಿಶೇಷ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು. ಭವಿಷ್ಯದ ಬದುಕಿನ ಯಶಸ್ಸಿಗೆ ಶ್ರಮ ಮುಖ್ಯ. ನಾಳೆ ನಮ್ಮ ಬದುಕು ಹೇಗಿರಬೇಕು ಎಂಬುದನ್ನು ನಾವೇ ರೂಪಿಸಿಕೊಳ್ಳಬಹುದಾಗಿದೆ. ಯಾವುದೇ ಒಂದು ಕಾರ್ಯ ಯಶಸ್ವಿಯಾಗಲು ಅದರ ಹಿಂದೆ ಉತ್ತಮ ಯೋಜನೆ, ಅದಕ್ಕೆ ತಕ್ಕ ಪರಿಶ್ರಮವೂ ಅವಶ್ಯವಾಗಿದೆ ಎಂದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ. ಶ್ರೀನಿವಾಸ ಅವರು ಗುರು-ಶಿಷ್ಯ ಪರಂಪರೆ ಕುರಿತು ಉಪನ್ಯಾಸ ನೀಡಿದರು. ಭಾರತೀಯರಲ್ಲಿ ಗುರು ಪರಂಪರೆ ಸಾಗಿ ಬಂದಿದ್ದು, ಗುರುಗೋವಿಂದಭಟ್ಟರು-ಶರೀಫರು, ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದರು, ದ್ರೋಣ-ಏಕಲವ್ಯ ಗುರು ಪರಂಪರೆಗೆ ಸಾಕ್ಷಿಯಾಗಿದ್ದಾರೆ. ತಾಯಿ ನೀಡಿದ ಜ್ಞಾನ ಶ್ರೇಷ್ಠವಾದುದು. ಗುರುವಿನ ಗುಲಾಮನಾಗುವ ಮೂಲಕ ಉತ್ತಮ ವ್ಯಕ್ತಿಯಾಗಲು ಸಾಧ್ಯವಿದೆ ಎಂದರು.

ಮುಖ್ಯ ಶಿಕ್ಷಕಿ ಕೆ.ಎಸ್. ಚಕ್ರಸಾಲಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೇಂತೂರ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ರಮೇಶ ಹರಿಜನ, ರತ್ನ ಭಾರತ ರೈತ ಸಂಘದ ರಾಷ್ಟ್ರೀಯ ಅಧ್ಯಕ್ಷ ನಾಗನಗೌಡ ಡಿ. ಪಾಟೀಲ, ಕರವೇ ಗಜಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು ಗೌರವಿಸಿದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ, ಪ್ರತಿಭಾ ನಿಜಗುಣಿ, ಎಫ್.ಸಿ. ಕೆಳಗಿನಮನಿ, ಶಂಭು ಕೆರಿ, ಐ.ಎಲ್. ಭೋಸ್ಲೆ, ವಿ.ಎಂ. ರೇವಣಕರ, ಬಸವರಾಜ ಬೆಂಡಲಗಟ್ಟಿ, ಅಶೋಕ ಮಂಡಲಕರ, ಕಬನೂರ, ಮುಖ್ಯ ಶಿಕ್ಷಕ ನದಾಫ್‌, ಶಾಲಾಭಿವೃದ್ಧಿ ಅಧ್ಯಕ್ಷ ಶೇಖಪ್ಪ ಸೊರಟೂರ, ಅಡಿವೆಪ್ಪ ತಡಿ, ಸುವರ್ಣಾ ಮಡಿವಾಳ, ಸುಭಾಸ ಕುರಭರ, ಗಂಗಾಧರ ರಾಮಾಪುರಮಠ, ಎಂ.ಬಿ. ಬೆಟದೂರ, ಎನ್.ಬಿ. ದೊಡ್ಡಮನಿ, ಅಶೋಕ ಪೋತರಾಜ, ದೀಪಾ ಗುರು, ಪ್ರಭು ಬಂಗೇರ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಸಿಬ್ಬಂದಿ ಇದ್ದರು.

Share this article