ನಾರಾಯಣಗುರು ಜಯಂತಿ
ಹಾಸನ: ಬ್ರಹ್ಮಶ್ರೀ ನಾರಾಯಣಗುರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಸಮಾಜದ ಬಂಧುಗಳಿಗೂ ಒಂದೇ ವೃತ್ತಿಯಲ್ಲ ಎಲ್ಲಾ ತರಹದ ವೃತ್ತಿಯಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಸಾಹಿತಿ ಎನ್.ಎಲ್.ಚನ್ನೇಗೌಡ ಮಾತನಾಡಿ, ನಾರಾಯಣ ಗುರುಗಳು ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲ, ಎಲ್ಲಾ ಸಮಾಜದವರಿಗೂ ಅವರ ನುಡಿಗಳು, ಕೆಲಸಗಳು ಮಾರ್ಗದರ್ಶನವಾಗಿವೆ. ಸಮಾಜದಲ್ಲಿ ಅವರು ತಂದಂತಹ ಸುಧಾರಣೆಗಳನ್ನು ಪಾಲಿಸುವುದರ ಜೊತೆಗೆ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ನಾರಾಯಣ ಗುರುಗಳು ಅಮಾನ್ಯ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ನಿಂತು ಮಾನವೀಯ ಮೌಲ್ಯಗಳನ್ನು ಸಾರ್ವಜನಿಕರಿಗೆ ತಿಳಿಸುವುದರ ಜೊತೆಗೆ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಅಸ್ಪೃಶ್ಯತೆ ಜಾತಿಯತೆಯ ಪಿಡುಗನ್ನು ನಿವಾರಿಸಿ, ಜಾತಿಭೇದ ಎನ್ನುವ ಮಾನವ ಮಾನವರ ನಡುವೆ ತಾವೇ ನಿರ್ಮಿಸಿಕೊಂಡ ಅಡ್ಡಗೋಡೆಯನ್ನು ಕೆಡವಿ ಮನುಕುಲ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಒಂದೇ ಸೂರಿ ನಡೆಗೆ ಸೇರಿಸಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.ಅನೇಕ ಶಿವ ದೇವಾಲಯಗಳನ್ನು ಕಟ್ಟಿಸಿ ಅಲ್ಲಿ ಸತ್ಯ, ಧರ್ಮ, ದಯಾ, ಶಾಂತಿ ಎಂಬ ಪದಗಳನ್ನು ಬರೆಸಿ ದೇವಾಲಯಗಳಲ್ಲಿ ಗ್ರಂಥಾಲಯಗಳನ್ನು ತೆರೆಯಿರಿ. ದೇವಸ್ಥಾನದಲ್ಲಿ ಒಂದು ದೀಪವನ್ನು ಹಚ್ಚಿ ಇದು ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವ ಸಂಕೇತ ಎಂದು ತಿಳಿಸಿದ್ದಾರೆ. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನ್ಯಾಯ ಸಮಾನತೆ, ದೈಹಿಕ ಮತ್ತು ಮಾನಸಿಕ ಸ್ವಚ್ಛತೆಯ ಪ್ರಾಮುಖ್ಯತೆ ಬಗ್ಗೆ ಬೋಧಿಸಿದ್ದಾರಲ್ಲದೆ, ಎಲ್ಲಾ ವರ್ಗದವರಿಗೂ ಸಮಾನ ಶಿಕ್ಷಣ ದೊರಕಬೇಕೆಂದು ತಿಳಿವಳಿಕೆ ಮೂಡಿಸುತ್ತಿದ್ದರು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್, ಆರ್ಯ ಈಡಿಗರ ಸಂಘದ ಅಧ್ಯಕ್ಷ ಧರ್ಮವಿಜೇತ್ ಎಂ., ತಾಲೂಕು ಅಧ್ಯಕ್ಷ ಮಹಾಂತೇಶ್ ಹಾಜರಿದ್ದರು.