ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕು ಹೊಳಲು ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು, ಯುವಕರು ಮಳೆರಾಯನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.ಗ್ರಾಮದ ಶ್ರೀಬಸವೇಶ್ವರ ಸರ್ಕಲ್ ಮತ್ತು ಜಂಗಿಮಲ್ ಸರ್ಕಲ್‌ನಲ್ಲಿ ಸೇರಿದ ಮುಖಂಡರು, ಮಕ್ಕಳೆಲ್ಲರೂ ಸೇರಿ ಮಣ್ಣಿನಲ್ಲಿ ಮಳೆರಾಯನ ಮೂರ್ತಿ ಪ್ರತಿಷ್ಠಾಪಿಸಿ ನಂತರ ಗ್ರಾಮದ ಆದಿ ದೇವತೆ ಶ್ರೀದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ತಮಟೆ, ನಗಾರಿಯೊಂದಿಗೆ ಉಯ್ಯಾ ಉಯ್ಯೋ ಮಳೆರಾಯ ಕೆರೆಕಟ್ಟೆಗೆ ನೀರಿಲ್ಲ ಎಂದು ಕೂಗುತ್ತಾ ಮಳೆರಾಯನನ್ನು ಬೇಡುತ್ತಾ ಬರಗಾಲದಲ್ಲಿ ಕರುಣೆ ತೋರಿಸಿ ಮಳೆ ಬೀಳಲೆಂದು ಪ್ರಾರ್ಥಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಮಳೆರಾಯ ಮೂರ್ತಿ ಹೊತ್ತುಕೊಂಡು ಗ್ರಾಮದ ಮಹಿಳೆಯರು ಮತ್ತು ಮಕ್ಕಳು ತಮ್ಮ ಮನೆಯಲ್ಲಿ ನೀರನ್ನು ತೆಗೆದುಕೊಂಡು ನೀರನ್ನು ಉಯ್ದೋ ನಂತರ ಪೂಜೆ ಸಲ್ಲಿಸಿದರು. ಗ್ರಾಮದ ಮುಂಡುಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು.ಮಳೆಗಾಗಿ ಪ್ರಾರ್ಥಿಸಿ ಅಣ್ಣೂರು ಗ್ರಾಮದಲ್ಲಿ ವಿಶೇಷ ಪೂಜೆಭಾರತೀನಗರ:ಭೀಕರ ಬರಗಾಲದ ಹಿನ್ನೆಲೆಯಲ್ಲಿ ಅಣ್ಣೂರು ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.ಗ್ರಾಮದ ಮಾರಿಗುಡಿ ಆವರಣದಲ್ಲಿ ಮಳೆರಾಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪುಟ್ಟಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಕರಗವನ್ನು ಗ್ರಾಮದ ಯುವಕನಿಗೆ ತಲೆಮೇಲೆ ಇಟ್ಟು ಗ್ರಾಮಸ್ಥರೆಲ್ಲರೂ ದೇವರಿಗೆ ಪ್ರಾರ್ಥಿಸಿ ಪಂಜಿನ ಸೇವೆ ಸಲ್ಲಿಸಿದರು.ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗವನ್ನು ಹೊತ್ತ ಯುವಕನಿಗೆ ಗ್ರಾಮದ ಮಹಿಳೆಯರು ಮತ್ತು ಪುರುಷರು ನೀರೆರೆದು ಮಳೆ ಬರುವಂತೆ ಪ್ರಾರ್ಥಿಸಿಕೊಂಡರು. ಅನ್ನ ಸಂತರ್ಪಣೆಗಾಗಿ ಗ್ರಾಮಸ್ಥರಿಂದ ದವಸ-ಧಾನ್ಯ ಸಂಗ್ರಹಿಸಿದರು.
ಕರಗ ಹೊತ್ತಿದ್ದ ಯುವಕ ತಮಟೆ ಸದ್ದಿಗೆ ಹೆಜ್ಜೆ ಇಡುತ್ತಾ ಮುಂದೆ ಸಾಗುತ್ತಿದ್ದಂತೆ ಗ್ರಾಮದ ಯುವಕರು ಸಹ ಸಾಥ್ ನೀಡಿದರು. ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿದೆ. ಮಳೆ ಇಲ್ಲದೆ ರೈತರ ಬದುಕು ಸಂಕಷ್ಟದಲ್ಲಿದೆ. ಹಾಗಾಗಿ ಜನರು ಮಳೆಗಾಗಿ ಗ್ರಾಮೀಣ ಪ್ರದೇಶದ ಆಚರಣೆಯಲ್ಲಿ ತೊಡಗಿ ಮಳೆರಾಯ ಮೋರೆಹೋದರು.