ಕಾವ್ಯದ ಮೂಲಕ ಸಾಮಾಜಿಕ ಅಪಸವ್ಯಗಳಿಗೆ ಕನ್ನಡಿ ಹಿಡಿಯಿರಿ

KannadaprabhaNewsNetwork |  
Published : Nov 02, 2026, 03:45 AM IST
ಹಗರಿಬೊಮ್ಮನಹಳ್ಳಿಯ ಜಿವಿಪಿಪಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಮ್ಮ ಪ್ರಕಾಶನ ಆಯೋಜಿಸಿದ್ದ ವಿಜಯನಗರ ಜಿಲ್ಲೆಯ ಆಯ್ದ ಪದವಿ ವಿದ್ಯಾರ್ಥಿಗಳ ಕವಿಗೋಷ್ಠಿಯನ್ನು ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯೆ ಪದ್ಮಾ ವಿಠಲ್ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕಾವ್ಯ,ಸಾಹಿತ್ಯದ ಎಲ್ಲ ಪ್ರಕಾರಗಳ ತಾಯಿಯಾಗಿದೆ. ಗದ್ಯಕ್ಕಿಂತ ಪದ್ಯ ಬಹುಬೇಗ ಜನಮಾನಸ ತಲುಪುತ್ತದೆ.

ಹಗರಿಬೊಮ್ಮನಹಳ್ಳಿ: ಯುವ ಕವಿಗಳು, ಕಾವ್ಯದ ಮೂಲಕ ಸಮಕಾಲೀನ ಸಾಮಾಜಿಕ ಸಮಸ್ಯೆ ಅಭಿವ್ಯಕ್ತಿಸುವ ಮೂಲಕ ಸಮಾಜದ ಕೈಗನ್ನಡಿಯಾಗಬೇಕು ಎಂದು ಸಾಹಿತಿ ಹಾಗೂ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯೆ ಪದ್ಮಾ ವಿಠಲ್ ಆಶಿಸಿದರು.

ಪಟ್ಟಣದ ಜಿವಿಪಿಪಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಸ್ಥಳಿಯ ಅಮ್ಮ ಪ್ರಕಾಶನ ಆಯೋಜಿಸಿದ್ದ ವಿಜಯನಗರ ಜಿಲ್ಲೆಯ ಆಯ್ದ ಪದವಿ ವಿದ್ಯಾರ್ಥಿಗಳ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕಾವ್ಯ,ಸಾಹಿತ್ಯದ ಎಲ್ಲ ಪ್ರಕಾರಗಳ ತಾಯಿಯಾಗಿದೆ. ಗದ್ಯಕ್ಕಿಂತ ಪದ್ಯ ಬಹುಬೇಗ ಜನಮಾನಸ ತಲಪುತ್ತದೆ. ಕಾವ್ಯ ನಿಂತ ನೀರಲ್ಲ. ಹರಿಯುವ ಜೀವನದಿಯಂತೆ. ಕಾಲಕಾಲಕ್ಕೆ ಕಾವ್ಯದ ಧ್ವನಿ ಬದಲಾಗಬೇಕು. ಕಾವ್ಯ ನಮ್ಮೆಲ್ಲರ ಅರಿವಿನ ಪರಿಧಿ ವಿಸ್ತರಿಸುತ್ತದೆ. ಬರೆಯುವ ಹವ್ಯಾಸ ಮುಂದುವರೆಸಿದರೆ ಉತ್ತಮ ಕವಿಗಳಾಗುವ ಸಾಧ್ಯತೆಗಳಿವೆ ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವ ವಿದ್ಯಾಲಯದ ಕನ್ನಡ ಸಂಶೋಧನೆ ಮತ್ತು ಅಧ್ಯಯನ ವಿಭಾಗದ ಸಹಾಯಕ ಪ್ರಧ್ಯಾಪಕ ಡಾ. ಮಹಾಂತೇಶ ಪಾಟೀಲ್ ಮಾತನಾಡಿ, ಯುವ ಕವಿಗಳು ಸಮಕಾಲೀನತೆಗೆ ತೀವ್ರವಾಗಿ ಸ್ಪಂದಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕು. ನಿಮ್ಮ ಕಾವ್ಯಗಳು ಸಮಾಜದ ಅಪಸವ್ಯಗಳಿಗೆ ಕಾರಣರಾಗುವ ಪಟ್ಟಭದ್ರತಿಗೆ ಭಯ ಹುಟ್ಟಿಸಬೇಕು ಎಂದು ಪ್ರತಿಪಾದಿಸಿದರು.

ಪ್ರಕಾಶನದ ಸಂಚಾಲಕ ಎಂ.ಪಿ.ಎಂ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಕವಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವರಲ್ಲಿರುವ ಸೃಜನಶೀಲತೆ ಅನಾವರಣಗೊಳಿಸುವ ಸದುದ್ದೇಶದ ಜತೆಗೆ ಹೊಸ ತಲೆಮಾರಿನ ಕವಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸುವ ಆಶಯದಿಂದ ಯುವ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಕೊಟ್ರೇಶ್ ಶೆಟ್ಟರ್, ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಕೆ.ಎಂ.ಇಂದುಮತಿ, ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಉಲವತ್ತಿ ಶೆಟ್ಟರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಡಿಗೇರ್ ಮೌನೇಶ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ ಮಾತನಾಡಿದರು.

ಜಿಲ್ಲೆಯ ನಾನಾ ತಾಲೂಕಿನ ಪದವಿ ಕಾಲೇಜಿನ ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಕವನಗಳ ಮೂಲಕ ಬದುಕಿನ ಅನುಭವ, ಸಾಮಾಜಿಕ ಕಳಕಳಿ, ಮಾನವೀಯ ಸಂಬಂಧ ಮತ್ತು ಸಮಕಾಲೀನ ಅಪಸವ್ಯ ಅನಾವರಣಗೊಳಿಸಿದರು.

ಪ್ರಕಾಶನದ ಸಂಸ್ಥಾಪಕ ಅಧ್ಯಕ್ಷೆ ಎಂ.ಪಿ.ಎಂ.ಚನ್ನಮ್ಮ, ಸಾಹಿತಿ ಎ.ಆರ್.ಪಂಪಣ್ಣ, ಐಕ್ಯೂಎಸಿ ಘಟಕದ ಸಂಚಾಲಕ ಡಾ.ನಾಗೇಂದ್ರಪ್ಪ, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಯಂಕಾರೆಡ್ಡಿ, ಹಂಪಾಪಟ್ಟಣದ ಜನನಿ ಸೇವಾ ಟ್ರಸ್ಟನ ಅಂಬಳಿ ಕೇಶವಮೂರ್ತಿ, ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷ ಎಚ್.ನಾಗರಾಜ್, ಪರಿಷತ್ತಿನ ಹಂಪಸಾಗರ ಹೋಬಳಿ ಘಟಕದ ಅಧ್ಯಕ್ಷ ಲಿಂಗದಳ್ಳಿ ಬಸವರಾಜಪ್ಪ ಹಾಗೂ ಪರಿಷತ್ತಿನ ಗೌರವ ಸಲಹೆಗಾರ ಟಿ. ನಾರಾಯಣಪ್ಪ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಬಿ.ಬಸವರಾಜ್ ಮತ್ತು ಎಲ್. ಶಿವಕುಮಾರ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ