ನೀರಾವರಿ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರ ಬಿಗಿ ಪಟ್ಟು । ಫೆಬ್ರವರಿಯಿಂದ 3 ತಿಂಗಳು ತಲಾ 20 ದಿನ ನೀರು ಬಿಡಲಿ
ಭದ್ರಾ ಜಲಾಶಯದಿಂದ ಪ್ರತಿ ವರ್ಷ ಫೆಬ್ರವರಿ- ಏಪ್ರಿಲ್ ವರೆಗೆ ಪ್ರತಿ ತಿಂಗಳು 20 ದಿನ ನೀರು ಬಿಡಬೇಕು, ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಶೇ.70ರಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿರುವ ದಾವಣಗೆರೆಯಲ್ಲೇ ಇನ್ನು ಮುಂದೆ ನಡೆಸಬೇಕೆಂಬುದೂ ಸೇರಿ ಎಲ್ಲಾ ನಿರ್ಣಯ ಜಾರಿಗೊಳಿಸಲು ರೈತ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.
ನಗರದ ನೀರಾವರಿ ಇಲಾಖೆ ವಿಭಾಗ ಕಚೇರಿಯಲ್ಲಿ ಗುರುವಾರ ಭದ್ರಾ ಅಚ್ಚುಕಟ್ಟು ಪ್ರದೇಶದ 2023-24ನೇ ಸಾಲಿನ ಬೇಸಿಗೆ ಹಂಗಾಮಿಗೆ ನೀರು ಹರಿಸುವ ಬಗ್ಗೆ ಜ.6ರಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೂಚನೆಯಂತೆ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ರೈತ ಮುಖಂಡರು ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಗೆ ಒತ್ತಾಯಿಸಿದರು.ಐಸಿಸಿ ಸಭೆಯ ನಿರ್ಣಯವಾಗದ ಹೊರತು ಸರ್ಕಾರದ ಆದೇಶದ ಮೇರೆಗೆ ಯಾವುದೇ ಕಾರಣಕ್ಕೂ, ಎಂತಹದ್ದೇ ಸಂದರ್ಭದಲ್ಲೂ ನೀರು ಬಿಡಬಾರದು. ಜಲಾಶಯದ ನೀರಿನ ಮಟ್ಟ 151.4 ಅಡಿ ಇದ್ದು, ಲಭ್ಯತೆಯ ನೀರಿನ ಪ್ರಮಾಣ 21.54 ಟಿಎಂಸಿ ನೀರಿದೆ. ಈ ಪ್ರಮಾಣದ ನೀರನ್ನು 72 ದಿನ ಹರಿಸಬಹುದಾಗಿದ್ದು, ಫೆ.1ರಿಂದ 20 ದಿನ ನೀರು ಬಿಡಬೇಕು. 10 ದಿನ ನೀರು ನಿಲ್ಲಿಸಿ, ಮತ್ತೆ ಮಾರ್ಚ್‌ನಲ್ಲಿ 20 ದಿನ ಬಿಡಬೇಕು. ಏಪ್ರಿಲ್‌ನಲ್ಲಿ ಸಹ 20 ದಿನ ನೀರು ಬಿಟ್ಟು, 10 ದಿನ ನೀರು ನಿಲ್ಲಿಸಬೇಕು. ಮೇ ತಿಂಗಳಿನಲ್ಲಿ ಉಳಿದ ನೀರು ಬಿಡಬೇಕು. ನಾಲೆಯಲ್ಲಿ ಹರಿಸುವ ಪ್ರಮಾಣದಲ್ಲಿ ಅರ್ಧದಷ್ಟು ನೀರು ಬೆಳ್ಳಿಗನೂಡು, ಹಿರೇಕೋಗಲೂರು ಸೂಪರ್ ಪ್ಯಾಸೇಜ್ ಒಡೆದಿದ್ದರಿಂದ ಅಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದು, ಅಲ್ಲಿ ದುರಸ್ತಿಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೀರಾವರಿ ಇಲಾಖೆ ಇಇ ಮಂಜುನಾಥ ಮಾತನಾಡಿ, ಅಚ್ಚುಕಟ್ಟು ರೈತರ ನಿರ್ಣಯ, ಬೇಡಿಕೆಗಳ ಬಗ್ಗೆ ಜ.6ರಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಭದ್ರಾ ಕಾಡಾ ಸಮಿತಿ ಸಭೆಯ ಗಮನಕ್ಕೆ ತರುತ್ತೇವೆ. ಭದ್ರಾ ಕಾಡಾ ಸಭೆ ದಾವಣಗೆರೆಯಲ್ಲೇ ನಡೆಸಬೇಕು, ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಪ್ರತಿ ತಿಂಗಳು 20 ದಿನ ನಾಲೆಗಳಿಗೆ ನೀರು ಹರಿಸುವುದೂ ಸೇರಿ ಅಚ್ಚುಕಟ್ಟು ರೈತರ ಬೇಡಿಕೆ ಬಗ್ಗೆ ಸಭೆಯಲ್ಲಿ ಪ್ರವ ಶಿವಮೊಗ್ಗದಲ್ಲಿ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಭದ್ರಾ ಕಾಡಾ ಸಮಿತಿ ಸಭೆಯ ಗಮನಕ್ಕೆ ತರುವ ಭರವಸೆ ನೀಡಿದರು.
ಅದಕ್ಕೆ ಆಕ್ಷೇಪಿಸಿದ ರೈತ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ, ನೀವು ನೀಡಿರುವ ಅಂಕಿ ಅಂಶಗಳ ಪ್ರಕಾರ 72 ದಿನ ಹರಿಸಲು ನೀರಿನ ಪ್ರಮಾಣ ಲಭ್ಯತೆ ಇದೆ. 7 ಟಿಎಂಸಿ ನೀರು ಕುಡಿಯುವ ನೀರಿಗಾಗಿ ಕಾಯ್ದಿರಿಸುವುದು, 2.4 ಟಿಎಂಸಿ ನೀರು ಆವಿಯಾಗುತ್ತದೆಂಬುದೆಲ್ಲಾ ಸರಿಯಲ್ಲ. ನಾಲೆಯಲ್ಲಿ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಕೆರೆಗಳಲ್ಲಿ ಸಂಗ್ರಹಿಸಿ ಕೊಳ್ಳಬಹುದು ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಕಾಡಾ ಸಮಿತಿಗೆ ಒಳಪಟ್ಟಿಲ್ಲ. ಹೀಗೆ ದಿಢೀರನೇ ನೀರು ಬಿಟ್ಟರೆ ಅಚ್ಚುಕಟ್ಟು ರೈತರಿಗೆ ಅನ್ಯಾಯವಾಗುತ್ತದೆ. ಕಾಡಾ ಸಮಿತಿಯೇ ನೀರಿನ ನಿರ್ಣಯ ಮಾಡಬೇಕು. ಇಲ್ಲಿ ನಿರ್ಣಯವಾಗುವ ಎಲ್ಲಾ ಬೇಡಿಕೆ ಕಾಡಾ ಸಮಿತಿಗೆ ನೀಡಬೇಕು. ದಾವಣಗೆರೆಯಲ್ಲೇ ಐಸಿಸಿ ಸಭೆ ಮಾಡಬೇಕು.
..................