ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ನಾ. ಕಾರಂತ ಪೆರಾಜೆ ಸಂಪಾದಕತ್ವದ ಶ್ರೀಧರಯಾನ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಚಿನ್ನಪ್ಪ ಗೌಡ ಅವರು, ವ್ಯಕ್ತಿ, ಕಲಾವಿದ, ಕಲೆಯ ಸಂಬಂಧಗಳ ಕುರಿತು ಮಾತನಾಡುತ್ತಾರೆ. ಕಲೆ ಮತ್ತು ಕಲಾವಿದ ಒಂದಾದರೆ, ವ್ಯಕ್ತಿ ಮತ್ತೊಂದು. ವ್ಯಕ್ತಿಯಾಗಿಯೂ ಕಲೆಯಲ್ಲಿ ತೊಡಗಿಸಿಕೊಂಡು ಕಲಾವಿದರಾಗಿ ಏಕೀಭವಿಸಿ ಜೀವಿಸಿದವರು ಕುಂಬಳೆ ಶ್ರೀಧರ ರಾಯರು ಎಂದರು.
ಉಪ್ಪಿನಂಗಡಿಯ ವೈದ್ಯ ಡಾ. ಸುಪ್ರೀತ್ ಲೋಬೊ ಮಾತನಾಡಿ, ಶ್ರೀಧರ ರಾವ್ ಜೊತೆಗಿನ ಒಡನಾಟ ಸ್ಮರಿಸಿದರು. ವಿಶ್ರಾಂತ ಪ್ರಾಧ್ಯಾಪಕ ಪೂವಪ್ಪ ಶೆಟ್ಟಿ ಅಳಿಕೆ ಕುಂಬಳೆ ಶ್ರೀಧರ ರಾವ್ ಸ್ಮರಣೆ ಮಾಡಿದರು.ಈ ಸಂದರ್ಭ ಸ್ಮೃತಿ ಗೌರವ ಕಾರ್ಯಕ್ರಮ ನಡೆಯಿತು. ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರು ಗೌರವ ಸ್ವೀಕರಿಸಿದರು. ದೇವಿಪ್ರಸಾದ ಕುಂಬ್ಳೆ ಸನ್ಮಾನಪತ್ರ ವಾಚಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ಕಲೆಯನ್ನು ಯಾವತ್ತೂ ಪ್ರೇಕ್ಷಕರ ಮಟ್ಟಕ್ಕೆ ಇಳಿಸಬೇಡಿ, ಪ್ರೇಕ್ಷಕರನ್ನು ಕಲೆಯ ಮಟ್ಟಕ್ಕೆ ಏರಿಸಿ ಎಂದರು.
ಕುಂಬಳೆ ಶ್ರೀಧರ ರಾವ್ ಸಹೋದರ ಗೋಪಾಲ ಕುಂಬ್ಳೆ ಸ್ವಾಗತಿಸಿದರು. ಹಿರಿಯ ಕಲಾವಿದ, ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಪ್ರಸಾದ ಕುಂಬ್ಳೆ ವಂದಿಸಿದರು.