ಆಲಮಟ್ಟಿ ಜಲಾಶಯಕ್ಕೆ ಸೋಮವಾರ ಒಳಹರಿವು ಆರಂಭಗೊಂಡಿದ್ದು, ಅವಳಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಗರಿಷ್ಠ 519.60 ಮೀಟರ್ ಎತ್ತರ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸೋಮವಾರ ಬೆಳಗ್ಗೆ 507.79 ಮೀಟರ್ ಎತ್ತರ ಹಾಗೂ 20.654 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ

ಆಲಮಟ್ಟಿ : ಆಲಮಟ್ಟಿ ಜಲಾಶಯಕ್ಕೆ ಸೋಮವಾರ ಒಳಹರಿವು ಆರಂಭಗೊಂಡಿದ್ದು, ಅವಳಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

ಗರಿಷ್ಠ 519.60 ಮೀಟರ್ ಎತ್ತರ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸೋಮವಾರ ಬೆಳಗ್ಗೆ 507.79 ಮೀಟರ್ ಎತ್ತರ ಹಾಗೂ 20.654 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 1,232 ಕ್ಯುಸೆಕ್ ಒಳಹರಿವು ಇದ್ದು, ಕೆಪಿಸಿಎಲ್ ಮೂಲಕ 100 ಕ್ಯುಸೆಕ್ ಹಾಗೂ ಕುಡಿವ ನೀರು, ಹಿನ್ನೀರು ಬಳಕೆಗೆಂದು 722 ಕ್ಯುಸೆಕ್ ಸೇರಿ 822 ಕ್ಯುಸೆಕ್ ಹೊರಹರಿವು ಇದೆ.

ಜುಲೈ ಮೊದಲ ವಾರ ಬಂದರೂ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರಲಿಲ್ಲ. ಡೆಡ್ ಸ್ಟೋರೇಜ್ ಹೊರತುಪಡಿಸಿ 2.927 ಟಿಎಂಸಿ ನೀರು ಮಾತ್ರ ಲಭ್ಯವಿತ್ತು. ಕೆಲ ದಿನಗಳು ಕಳೆದಿದ್ದರೆ ಅವಳಿ ಜಿಲ್ಲೆಯಲ್ಲಿ ಕುಡಿವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಆದರೆ ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶ ಹಾಗೂ ಬೆಳಗಾವಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಸೋಮವಾರದಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿರುವುದು ಅವಳಿ ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ಜನರಲ್ಲಿ ಸಂಭ್ರಮ ಮನೆಮಾಡಿದೆ.

ಹೆಚ್ಚಿದ ಮಹಾ ಮಳೆ:

ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆಯ ಅಬ್ಬರ ಸೋಮವಾರವೂ ಮುಂದುವರಿದಿದೆ. ಕೊಯ್ನಾ 257 ಮಿ.ಮೀ, ನವಜಾ 244 ಮಿ.ಮೀ, ಮಹಾಬಳೇಶ್ವರದಲ್ಲಿ ದಾಖಲೆಯ 473 ಮಿ.ಮೀ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದರೂ ಅಲ್ಲಿನ ಜಲಾಶಯಗಳು ಸಾಮರ್ಥ್ಯದ ಶೇ.35ರಷ್ಟು ಮಾತ್ರ ಭರ್ತಿಯಾಗಿವೆ. ಇದೇ ಪ್ರಮಾಣದಲ್ಲಿ 15 ದಿನಗಳ ಕಾಲ ನಿರಂತರ ಮಳೆಯಾದರೆ ಜಲಾಶಯ ಸಂಪೂರ್ಣ ಭರ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ 59,875 ಕ್ಯುಸೆಕ್ ಕೃಷ್ಣೆಯ ಹರಿವಿದೆ

ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ 59,875 ಕ್ಯುಸೆಕ್ ಕೃಷ್ಣೆಯ ಹರಿವಿದ್ದು, ಕಲ್ಲೋಳ ಬ್ಯಾರೇಜ್ ಬಳಿ ದೂಧಗಂಗಾ ನದಿಯ ಹರಿವು 17,248 ಕ್ಯುಸೆಕ್ ಸೇರಿ ಒಟ್ಟಾರೆ 77,123 ಕ್ಯುಸೆಕ್ ಕೃಷ್ಣೆಯ ಹರಿವು ಇದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಆಲಮಟ್ಟಿ ಜಲಾಶಯದ ಒಳಹರಿವು ಇನ್ನೂ ಹೆಚ್ಚಿರಲಿದೆ. ಹಿಪ್ಪರಗಿ ಜಲಾಶಯದಿಂದ 55,150 ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.