ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಧೋಳ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೇವೆಗಳ ಅನುಷ್ಠಾನವನ್ನು ಜಿ.ಪಂ ಸಿಇಒ ಗಜಾನನ ಬಾಲೆ ಸಮಗ್ರವಾಗಿ ಪರಿಶೀಲಿಸಿದರು. ಪರಿಶೀಲನೆಯ ಆರಂಭದಲ್ಲಿ ಮಂಟೂರ ಗ್ರಾಪಂಗೆ ಭೇಟಿ ನೀಡಿ, ಡಿಜಿಟಲ್ ಗ್ರಂಥಾಲಯ ವೀಕ್ಷಿಸಿದರು. ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಹಾಗೂ ಯುವಜನರು ಡಿಜಿಟಲ್ ಗ್ರಂಥಾಲಯದ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಅರಿವು ಮೂಡಿಸಲು ಸೂಚಿಸಿದರು. ನಂತರ ಮಂಟೂರ ಕೆರೆಗೆ ಭೇಟಿ ನೀಡಿ, ಕೆರೆ ನಿರ್ವಹಣೆ, ನೀರಿನ ಸಂಗ್ರಹ ಸಾಮರ್ಥ್ಯ, ಸ್ವಚ್ಛತೆ ಹಾಗೂ ಸಂರಕ್ಷಣಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಕೆರೆಯ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ನಂತರ ಮೆಳ್ಳಿಗೇರಿ ಗ್ರಾಪಂ ವ್ಯಾಪ್ತಿಯ ಕಿಶೋರಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ (ಎಎಒ) ಕಾಮಗಾರಿಗಳನ್ನು ಪರಿಶೀಲಿಸಿದರು. ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಶೈಕ್ಷಣಿಕ ವಾತಾವರಣ, ವಸತಿ ವ್ಯವಸ್ಥೆ, ಆಹಾರದ ಗುಣಮಟ್ಟ, ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ ಸಿಇಒ ಅವರು ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆ ಹಾಗೂ ಕಲಿಕಾ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಶಾಲಾ ಆಡಳಿತಕ್ಕೆ ಸೂಚಿಸಿದರು.

ಬಳಿಕ ಹಲಗಲಿ ಗ್ರಾಮಕ್ಕೆ ಭೇಟಿ ನೀಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳು, ಔಷಧಿ ಲಭ್ಯತೆ, ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ, ತಾಯಿ-ಮಗು ಆರೋಗ್ಯ ಸೇವೆಗಳು ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನಿರಂತರವಾಗಿ ಒದಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಅದೇ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳು ಹಾಗೂ ಡಿಜಿಟಲ್ ಗ್ರಂಥಾಲಯ ವೀಕ್ಷಿಸಿ, ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಗ್ರಾಮೀಣ ಪ್ರದೇಶಗಳ ಯುವಜನರು ಮತ್ತು ವಿದ್ಯಾರ್ಥಿಗಳು ಡಿಜಿಟಲ್ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಗ್ರಾಪಂಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಸಾರ್ವಜನಿಕರಿಗೆ ಗುಣಮಟ್ಟದ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವುದು ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. ಪರಿಶೀಲನೆಯ ಸಂದರ್ಭದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು, ನಿಗದಿತ ಗಡುವಿನೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಿ ಜನಸ್ನೇಹಿ ಆಡಳಿತವನ್ನು ಖಚಿತಪಡಿಸಬೇಕು ಎಂದು ನಿರ್ದೇಶನ ನೀಡಿದರು. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಪರಿಣಾಮಕಾರಿ ಮೇಲ್ವಿಚಾರಣೆಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿದರು.


ಪ್ರತಿಯೊಂದು ಮನೆಗೂ ಸುರಕ್ಷಿತ ಹಾಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಪೈಪ್ಲೈನ್ ಅಳವಡಿಕೆ, ನೀರಿನ ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಕಂಡುಬರದಂತೆ ವಿಶೇಷ ನಿಗಾವಹಿಸಿ.

-ಗಜಾನನ ಬಾಲೆ, ಜಿಪಂ ಸಿಇಒ