ಕನ್ನಡಪ್ರಭವಾರ್ತೆ ಉಳ್ಳಾಲ

ಪ್ರೊ.ನಾಗಪ್ಪ ಗೌಡ ಮಂಗಳೂರು ವಿವಿ ಸಾಧಕ ವಿದ್ಯಾರ್ಥಿಯಾಗಿ, ಹಿರಿಯ ಪ್ರಾಧ್ಯಾಪಕ, ಎಸ್ ವಿಪಿ ಕನ್ನಡ ಸಂಸ್ಥೆ ವಿಭಾಗ ಅಧ್ಯಕ್ಷರಾಗಿ ವಿವಿಯ ಅನೇಕ ಜವಾಬ್ದಾರಿಗಳನ್ಜು ಸಮರ್ಥವಾಗಿ ನಿರ್ವಹಿಸಿದ ಆದರ್ಶ ಪ್ರಾಧ್ಯಾಪಕ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ‌.ಎಲ್.ಧರ್ಮ ಹೇಳಿದರು.ಮಂಗಳೂರು ವಿಶ್ವವಿದ್ಯಾಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಮಂಗಳವಾರ ಕನ್ನಡ ಪ್ರಾಧ್ಯಾಪಕ, ವಿಭಾಗದ ಅಧ್ಯಕ್ಷರಾಗಿ ನಿವೃತ್ತರಾದ ಪ್ರೊ.ನಾಗಪ್ಪ ಗೌಡ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದರು.

ವಿಶ್ರಾಂತ ಕುಲಪತಿ ಹಾಗೂ ವಿದ್ವಾಂಸ ಪ್ರೊ.ಬಿ.ಎ. ವಿವೇಕ ರೈ ಮಾತನಾಡಿ, ಮಂಗಳೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಗೆ ದೊಡ್ಡ ಪರಂಪರೆಯಿದೆ. ಪ್ರೊ.ಎಸ್ ವಿ ಪಿ, ಪ್ರೊ. ಲಕ್ಕಪ್ಪಗೌಡ ಸೇರಿದಂತೆ ಅನೇಕ ಹಿರಿಯ ಪ್ರಾಧ್ಯಾಪಕರು ಇಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ನಿವೃತ್ತರಾಗಿದ್ದಾರೆ ಎಂದರು.

ಮಂಗಳೂರು ವಿವಿ ಕಲಾನಿಕಾಯದ ಡೀನ್ ಪ್ರೊ.ಸೋಮಣ್ಣ ಹೊಂಗಳ್ಳಿ ಮಾತನಾಡಿ ನಾಗಪ್ಪ ಗೌಡರದ್ದು ಬಡವರ ಪರವಾದ ಒಲವು ಎಂದರು.

ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ವಿವಿಯ ಕನ್ನಡ ವಿಭಾಗದ ಕಟ್ಟುವಿಕೆಯಲ್ಲಿ ಅವರ ಪ್ರಾಮಾಣಿಕ ಪ್ರಯತ್ನವಿದೆ ಎಂದರು.


ವಿಭಾಗದ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ‌.ನಾಗಪ್ಪ ಗೌಡ ಮಾತನಾಡಿ, ನಾನು ಘಟ್ಟ ಇಳಿದು 43 ವರ್ಷಗಳಾಗಿದ್ದು ಬಳಿಕ ಇಲ್ಲಿಯೇ ವಿದ್ಯಾಭ್ಯಾಸ, ವೃತ್ತಿ ಜೀವನವನ್ನು ಆರಂಭಿಸಿ ಎಸ್ ವಿಪಿ ಕನ್ನಡ ಸಂಸ್ಥೆಯಲ್ಲಿ ಅಧ್ಯಕ್ಷನಾಗಿ ನಿವೃತ್ತಿಯಾಗುತ್ತಿದ್ದೇನೆ. ಕರಾವಳಿಯ ಮಣ್ಣನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಚಿನ್ನಪ್ಪ ಗೌಡ, ಪ್ರೊ.ಅಭಯ್ ಕುಮಾರ್ , ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಸೇರಿದಂತೆ ಪ್ರೊ‌. ನಾಗಪ್ಪ ಗೌಡ ಅವರ ಪತ್ನಿ ಆಶಾ, ಪುತ್ರರಾದ ಶ್ರೀವತ್ಸ, ಪೂರ್ಣಚಂದ್ರ ಮತ್ತು ಪ್ರೊ.ನಾಗಪ್ಪ ಗೌಡ ಅವರ ಸಹೋದ್ಯೋಗಿಗಳು, ಮಿತ್ರರು, ಸಂಶೋಧನಾ ವಿದ್ಯಾರ್ಥಿಗಳು, ವಿವಿದ ಪೀಠಗಳ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕ ಡಾ.ಯಶುಕುಮಾರ್ ನಿರೂಪಿಸಿದರು.