ಹೊಳೆನರಸೀಪುರಕ್ಕೆ ಈಗ ಸ್ವಾತಂತ್ರ್ಯ ಬಂದಿದೆ

KannadaprabhaNewsNetwork | Published : Nov 26, 2024 12:46 AM

ಸಾರಾಂಶ

ಹೊಳೆನರಸೀಪುರದಲ್ಲಿ ಬದಲಾವಣೆಯ ಪರ್ವ ಪ್ರಾರಂಭಗೊಂಡಿದೆ. ಜತೆಗೆ ತಾಲೂಕಿನ ದಿಕ್ಕು, ದೆಸೆ, ವಾಸ್ತು ಎಲ್ಲವೂ ಬದಲಾಗುತ್ತಿದ್ದು, ಒಂದರ್ಥದಲ್ಲಿ ಸ್ವಾತಂತ್ರ್ಯ ಲಭಿಸಿದೆ. ಇಲ್ಲಿಯ ತನಕ ಯಾವುದೇ ಕಾರ್ಯಕ್ರಮದಲ್ಲಿ ಪಟ್ಟಣದ ಯಾವುದೋ ಮನೆ ಅಥವಾ ತೋಟದ ಮನೆಯಲ್ಲಿ ಮಾತ್ರ ವಿದ್ಯುತ್ ದೀಪಗಳು ಉರಿಯುತ್ತಿತ್ತು. ಇಂದು ಪಟ್ಟಣವೆಲ್ಲ ದೀಪಾಲಂಕಾರದಿಂದ ಬೆಳಗುತ್ತಿದೆ. ನಿಮ್ಮೂರಿಗೆ ಹೊಸ ಮೆರುಗು ತಂದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರು ಶಾಸಕ ಎಚ್.ಡಿ.ರೇವಣ್ಣ ಅವರ ಕಾರ್ಯವೈಖರಿಯನ್ನು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಹೊಳೆನರಸೀಪುರದಲ್ಲಿ ಬದಲಾವಣೆಯ ಪರ್ವ ಪ್ರಾರಂಭಗೊಂಡಿದೆ. ಜತೆಗೆ ತಾಲೂಕಿನ ದಿಕ್ಕು, ದೆಸೆ, ವಾಸ್ತು ಎಲ್ಲವೂ ಬದಲಾಗುತ್ತಿದ್ದು, ಒಂದರ್ಥದಲ್ಲಿ ಸ್ವಾತಂತ್ರ್ಯ ಲಭಿಸಿದೆ. ಇಲ್ಲಿಯ ತನಕ ಯಾವುದೇ ಕಾರ್ಯಕ್ರಮದಲ್ಲಿ ಪಟ್ಟಣದ ಯಾವುದೋ ಮನೆ ಅಥವಾ ತೋಟದ ಮನೆಯಲ್ಲಿ ಮಾತ್ರ ವಿದ್ಯುತ್ ದೀಪಗಳು ಉರಿಯುತ್ತಿತ್ತು. ಇಂದು ಪಟ್ಟಣವೆಲ್ಲ ದೀಪಾಲಂಕಾರದಿಂದ ಬೆಳಗುತ್ತಿದೆ. ನಿಮ್ಮೂರಿಗೆ ಹೊಸ ಮೆರುಗು ತಂದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರು ಶಾಸಕ ಎಚ್.ಡಿ.ರೇವಣ್ಣ ಅವರ ಕಾರ್ಯವೈಖರಿಯನ್ನು ಟೀಕಿಸಿದರು.

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಮೀಪ ನಾಡದೇವತೆ ಶ್ರೀ ಭುವನೇಶ್ವರಿ ಭಾವಚಿತ್ರವಿದ್ದ ರಥ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಸದ ಶ್ರೇಯಸ್ ಅವರಲ್ಲಿ ತಾಲೂಕಿನ ಶ್ರೇಯಸ್ಸು ಆಡಗಿದೆ ಮತ್ತು ದಿ. ಜಿ.ಪುಟ್ಟಸ್ವಾಮಿಗೌಡರ ಅವಧಿ ಮರುಕಳಿಸುತ್ತಿದ್ದು, ಒಂದರ್ಥದಲ್ಲಿ ಸ್ವಾತಂತ್ರ್ಯ ಲಭಿಸಿದೆ. ನಮ್ಮಿಬ್ಬರ ಪಕ್ಷಗಳು ಬೇರೆ ಬೇರೆಯಾದರೂ ರಾಜಕೀಯ ಬರುತ್ತೆ, ಹೋಗುತ್ತೆ ಆದರೆ ಮಾನವೀಯತೆ ಮುಖ್ಯವಾಗಿದ್ದು, ಬಹಳ ದಿನಗಳಿಂದ ಕಳೆದು ಹೋಗಿದ್ದ ಮಾನವೀಯತೆ ವಾಪಸ್ ಬಂದಿದೆ. ಮುಂದಿನ ದಿನಗಳಲ್ಲಿ ಮಾದರಿಯಾಗಲಿ ಎಂದು ಶುಭ ಹಾರೈಸುತ್ತಾ, ನಾಡಹಬ್ಬದ ಆಚರಣೆಗೆ ಹೊಸ ರೂಪದೊಂದಿಗೆ ಪಟ್ಟಣಕ್ಕೆ ಹೊಸ ಮೆರಗನ್ನು ನೀಡಿದ ಯುವಕ ಮಿತ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಎಲ್ಲಿಯ ತನಕ ನೀವು ಶ್ರೇಯಸ್ ಅವರಿಗೆ ಅಧಿಕಾರ ನೀಡುತ್ತೀರೊ ಅಲ್ಲಿನ ತನಕ ಯಾವುದೇ ಪಕ್ಷದಲ್ಲಿದ್ದರೂ ಈ ವೇದಿಕೆಯಲ್ಲಿ ಅವರ ಜತೆಗಿರುತ್ತೇನೆ ಎಂದರು.ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ಮಾಜಿ ಶಾಸಕ ಪ್ರೀತಂ ಅಣ್ಣ ಇಂದಿನ ಕಾರ್ಯಕ್ರಮಕ್ಕೆ ಬಂದಿರೋದು ಸಂತೋಷ ತಂದಿದೆ, ನಮ್ಮ ಪಕ್ಷ ಬೇರೆ ಬೇರೆ ಇರಬಹುದು, ಆದರೆ ನಾವುಗಳು ಒಂದೇ ಕುಟುಂಬದ ಸದಸ್ಯರಾಗಿದ್ದು, ನನ್ನ ಶ್ರೀಮತಿ ಅವರ (ಪ್ರೀತಂ) ಕುಟುಂಬ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು. ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದೀರಿ, ನಾನು ನಿಮ್ಮ ಮನೆ ಮಗ, ಎಂಪಿ ಎಂಬ ಹಮ್ಮು ಬಿಮ್ಮು ನನಗಿಲ್ಲ. ಏನೇ ಸಮಸ್ಯೆ ಇದ್ದರೂ ಸದಾ ನಾನು ನಿಮ್ಮ ಜೊತೆಗಿದ್ದು, ನನ್ನ ವ್ಯಾಪ್ತಿಯಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಮಾಡಿಕೊಡಸುತ್ತೇನೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ಮಾತನಾಡಿ, ಪಟ್ಟಣದಲ್ಲಿ ನಾಲ್ಕು ದಿನಗಳು ಯಶಸ್ವಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಲವಾರು ಜನರು ಸಹಕಾರ ನೀಡಿದ್ದಾರೆ, ಆದರೆ ಈ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಲು ನಮ್ಮ ಶತ್ರುಗಳು ಕಾರಣ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.ನಾಲ್ಕು ದಿನಗಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಮೈಸೂರು ದಸರಾ ಹಾಗೂ ಹಾಸನಾಂಬ ಜಾತ್ರೆಯ ವಿದ್ಯುತ್ ದೀಪಾಲಂಕಾರ ನೆನಪಿಸುವ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ನ. ೨೧ರ ಗುರುವಾರ ಸಂಜೆ ಕನ್ನಡ ಜೀ ವಾಹಿನಿಯ ಸರಿಗಮಪ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮವನ್ನು ಬಸವನಗುಡಿ ಬೀದಿಯಲ್ಲಿ ನಿರ್ಮಿಸಿದ್ದ ಪುನೀತ್ ರಾಜ್‌ಕುಮಾರ್‌ ವೇದಿಕೆಯಲ್ಲಿ ನಡೆಸಲಾಗಿತ್ತು.

ನ.೨೨ರ ಶುಕ್ರವಾರ ಸಂಜೆ ಪಟ್ಟಣದ ಬಯಲು ರಂಗಮಂದಿರ ಮೈದಾನದಲ್ಲಿ ನಿರ್ಮಿಸಿದ್ದ ರಣಧೀರ ಕಂಠೀರವ ವೇದಿಕೆಯಲ್ಲಿ ಶ್ರೀ ಜೈ ವೀರಹನುಮಾನ್ ದೊಡ್ಡಗರಡಿಯ ಅಧ್ಯಕ್ಷರು, ಸದಸ್ಯರು ಹಾಗೂ ಉಸ್ತಾದರ ಸಹಕಾರದಲ್ಲಿ ೩೦ ಜೊತೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯನ್ನು (ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗ) ಆಯೋಜನೆ ಮಾಡಲಾಗಿತ್ತು, ಬೆಳಗಾಂನ ಪೈಲ್ವಾನ್ ಪ್ರಕಾಶ್ ಇಂಗಳಗಿ ಹಾಗೂ ಹರಿಯಾಣದ ಪೈಲ್ವಾನ್ ಸಂದೀಪ್‌ಶ್ರಾಮ್(ಇಂಡಿಯನ್ ಆರ್ಮಿ) ಜೋಡಿ ಎರಡು ಗಂಟೆ ನಿರಂತರ ಕುಸ್ತಿ ಆಡಿದರೂ ಯಾರೊಬ್ಬರೂ ಸೋಲೊಪ್ಪಿಕೊಳ್ಳಲಿಲ್ಲ. ಇವರುಗಳ ಕುಸ್ತಿ ರೋಮಾಂಚನಗೊಳಿಸುವ ಜತೆಗೆ ಪ್ರೇಕ್ಷಕರು ಹಾಗೂ ಇತರೆ ಪೈಲ್ವಾನರು ಉಸಿರು ಬಿಗಿ ಹಿಡಿದು ತದೇಕ ಚಿತ್ತದಿಂದ ವೀಕ್ಷಿಸುವಂತೆ ಮಾಡಿದ್ದ ಆ ಕ್ಷಣಗಳು ಅತ್ಯದ್ಭುತವಾಗಿತ್ತು ಮತ್ತು ಜನಮನ ಸೂರೆಗೊಂಡಿತ್ತು.

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಸ್ಥಾನದ ಮುಂಭಾಗ ನ.೨೩ ರ ಶನಿವಾರ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ಮೈಸೂರಿನ ಪಿಎಂ ಸ್ಟಾರ್ ಮ್ಯೂಸಿಕಲ್ ಈವೆಂಟ್ ತಂಡದ ಮಿಮಿಕ್ರಿ ಮಹೇಶ್ ತಂಡದ ಹಿನ್ನೆಲೆ ಸಂಗೀತದ ಜೊತೆಯಲ್ಲಿ ಕನ್ನಡೆ ಹಾಡುಗಳಿಗೆ ಡಿಕೆಡಿ ಕಲಾವಿದರ ನೃತ್ಯ ರಂಜಿಸಿದವು ಮತ್ತು ಹಾಸ್ಯ ಕಲಾವಿದರಾದ ತುಕಾಲಿ ಸಂತೋಷ್, ಚಂದ್ರಪ್ರಭ, ಮಾನಸ, ಗಡ್ಡಪ್ಪ, ದಾನಪ್ಪ, ಬಸವರಾಜು, ಮನೋಹರ, ಸದಾನಂದ ಅವರಗಳ ಹಾಸ್ಯ ಕಾರ್ಯಕ್ರಮ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

ನ. ೨೪ರ ಭಾನುವಾರ ಸಂಜೆ ಭವ್ಯವಾಗಿ ಅಲಂಕರಿಸಿದ ರಥದಲ್ಲಿ ತಾಯಿ ಶ್ರೀ ಭುವನೇಶ್ವರಿಯ ಉತ್ಸವವು ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನದ ಮೆರವಣಿಗೆ ರಾತ್ರಿ ೯ ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ವೈಭವದಿಂದ ನಡೆಯಿತು. ಶ್ರೀ ಲಕ್ಷ್ಮೀನರಸಿಂಹ ಯುವಕರ ಸಂಘದ ಸದಸ್ಯರು ಆಯೋಜನೆ ಮಾಡಿದ್ದ ನಾಲ್ಕು ದಿನಗಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯುವ ಜತೆಗೆ ನಾಗರಿಕರ ಪ್ರಶಂಸೆಗೆ ಪಾತ್ರವಾಯಿತು.

Share this article