ಬೀದರ್‌ನಲ್ಲಿ ರಂಗೇರಿದ್ದ ರಂಗಿನಾಟ: ಕುಣಿದು ಕುಪ್ಪಳಿಸಿದ ಯುವ ಪಡೆ!

KannadaprabhaNewsNetwork | Published : Mar 26, 2024 1:07 AM

ಸಾರಾಂಶ

ರಂಗುರಂಗಿನಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳು. ಬೀದರ್‌ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಭಜ೯ರಿ ಓಕುಳಿಯಾಟ, ಭಾರಿ ಸಂಭ್ರಮ. ರಂಗು ತುಂಬಿದ ಗಡಿಗೆಗಳನ್ನು ಒಡೆಯಲು ಒಬ್ಬರ ಮೇಲೊಬ್ಬರು ಹತ್ತಿ ಹರಸಾಹಸ ಪಡುತ್ತಿದ್ದ ಯುವಕರ ಪಡೆ.

ಕನ್ನಡಪ್ರಭ ವಾತೆ೯ ಬೀದರ್‌

ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಸಂಭ್ರಮ ರಂಗೇರಿತ್ತು. ಶಾಂತಿಯುತ ಹೋಳಿ ಆಚರಣೆಯಲ್ಲಿ ಚಿಣ್ಣರಿಂದ ಹಿಡಿದು ವಯೋವೖದ್ಧರೂ ರಂಗಿನಾಟದಲ್ಲಿ ಮಿಂದೆದ್ದರು. ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಪಟ್ಟಣಗಳು ಸೋಮವಾರ ಅಕ್ಷರಶಃ ಬಣ್ಣದಾಟದಲ್ಲಿ ಮುಳುಗಿದ್ದವು.

ಪರಸ್ಪರ ಬಣ್ಣದೆರಚಾಟದಲ್ಲಿ ತೊಡಗಿದ್ದ ಚಿಣ್ಣರ ಗುಂಪು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರೆ, ರಂಗು ತುಂಬಿದ ಗಡಿಗೆಗಳನ್ನು ಒಡೆಯಲು ಒಬ್ಬರ ಮೇಲೊಬ್ಬರು ಹತ್ತಿ ಹರಸಾಹಸ ಪಡುತ್ತಿದ್ದ ಯುವಕರ ಪಡೆ ಒಂದೆಡೆಯಾದರೆ, ಅದನ್ನು ಹಿಮ್ಮೆಟ್ಟಿಸಲು ಪೈಪ್‌ ಮೂಲಕ ರಭಸದಲ್ಲಿ ನೀರನ್ನು ಚಿಮ್ಮಿಸುತ್ತಿದ್ದ ಮತ್ತೊಂದು ಗುಂಪು ಜಿದ್ದಾಜಿದ್ದಿ ಸ್ಪಧೆ೯ಗೆ ಬಿದ್ದಿದ್ದರು. ಕೊನೆಗೂ ಗಡಿಗೆ ಒಡೆದ ಯುವಕರ ಗುಂಪು ರಂಗಿನಲ್ಲಿ ತೋಯ್ದು ತೊಪ್ಪೆಯಾಯ್ತು.

ಇತ್ತ, ಗುರುದ್ವಾರ ಪರಿಸರದಲ್ಲಿ ಹೋಳಿ ಹಬ್ಬದ ಸಂಭ್ರಮವನ್ನು ಸವಿದ ಸಿಖ್‌ ಯುವಕರ ಗುಂಪು ಹೋಳಿ ಮೆರವಣಿಗೆಗೆ ಹೊಸ ಹುರುಪು ಮೂಡಿಸಿದರು. ಅಲ್ಲಲ್ಲಿ ಅಳವಡಿಸಿದ್ದ ಡಿಜೆ ಸೌಂಡ್‌ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಮಕ್ಕಳು, ಯುವಕರು ಮುಂತಾದವರು ರಸ್ತೆಯಲ್ಲೆಲ್ಲ ಕುಣಿದು ಕುಪ್ಪಳಿಸಿದರು. ಬೀದರ್‌ನ ಮಡಿವಾಳೇಶ್ವರ ವೖತ್ತ, ಡಾ. ಅಂಬೇಡ್ಕರ್‌ ವೖತ್ತ, ಬಸವೇಶ್ವರ ವೖತ್ತ, ದೇವಿ ಕಾಲೋನಿ, ಎಲ್‌ಐಜಿ ಕಾಲೋನಿ, ಬ್ಯಾಂಕ್‌ ಕಾಲೋನಿ, ಮಹೇಶ ನಗರ, ವಿದ್ಯಾನಗರ, ಆನಂದ ನಗರ, ಮುಂತಾದ ಕಡೆಗಳಲ್ಲಿ ಹೋಳಿಯಾಟದ ಸೊಬಗು ಎಲ್ಲರನ್ನು ಸಂಭ್ರಮದ ಲೋಕದಲ್ಲಿ ತೇಲಿಸಿತ್ತು.

ಸಾರ್ವಜನಿಕರೊಂದಿಗೆ ಮಿಂದೆದ್ದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ: ಇನ್ನು, ಹೋಳಿ ಹಬ್ಬದ ರಂಗಿನಾಟದ ಸಂಭ್ರಮಕ್ಕೆ ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರು ಸಾಥ್‌ ನೀಡಿದ್ದು ರಂಗಿನಾಟದ ಸಂಭ್ರಮಕ್ಕೆ ಮತ್ತಷ್ಟೂ ರಂಗು ಬೆರೆಸಿದ್ದು ವಿಶೇಷ.

ಹೋಳಿ ಹಬ್ಬದ ಸಂಭ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಜಿಲ್ಲಾಧಿಕಾರಿಗಳ ಗೃಹ ಕಚೇರಿಯಲ್ಲಿ ಸಾವ೯ಜನಿಕರೊಡನೆ ಬೆರೆಯುವ ಮೂಲಕ ಬಣ್ಣದಾಟಕ್ಕೆ ಮತ್ತಷ್ಟೂ ಸಡಗರ ಮೂಡಿಸಿದರು. ಜನರ ಜೊತೆ ಹೋಳಿಯಾಟದ ತಾಳಕ್ಕೆ ಹೆಜ್ಜೆ ಹಾಕಿದ ಹಿರಿಯ ಅಧಿಕಾರಿಗಳು ಬಣ್ಣದ ಗುಂಗಿನಲ್ಲಿ ಮುಳುಗಿದ್ದಂತಿತ್ತು. ಭಾನುವಾರ ರಾತ್ರಿ ಕಾಮದಹನದ ಸಂದರ್ಭ ವಿರೋಧ ಪಕ್ಷದ ನಾಯಕರೊಂದಿಗೆ ಆ ಪಕ್ಷ ಪ್ರಮುಖರು, ಶಾಸಕರು ಪಾಲ್ಗೊಂಡಿದ್ದರು.

Share this article