ಹಂಪಿಯಲ್ಲಿ ದೇಶ, ವಿದೇಶಿಗರ ಹೋಳಿ ಸಂಭ್ರಮ!

KannadaprabhaNewsNetwork |  
Published : Mar 16, 2025, 01:46 AM IST
15ಎಚ್‌ಪಿಟಿ10- ಹಂಪಿ ಶ್ರೀವಿರೂಪಾಕ್ಷೇಶ್ವರ ರಥಬೀದಿಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಹೋಳಿ ಸಂಭ್ರಮ ಆಚರಿಸಿದರು. (ಚಿತ್ರ- ಸುರೇಶ್‌ ಎಲ್‌.) | Kannada Prabha

ಸಾರಾಂಶ

ವಿಶ್ವವಿಖ್ಯಾತ ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಒಂದೆಡೆ ಸೇರಿ ಸಂಭ್ರಮದಿಂದ ಹೋಳಿ ಆಚರಿಸಿದರು. ಈ ಮೂಲಕ ಇಡೀ ವಿಶ್ವಕ್ಕೆ ಶಾಂತಿ, ಸೌಹಾರ್ದತೆ, ಏಕತೆ, ಸಹೋದರತ್ವದ ಸಂದೇಶ ಸಾರಿದರು.

ಸಾಣಾಪುರ ಕಹಿ ಘಟನೆ ಮರೆಸಿದ ರಂಗಿನಾಟ/ ವಿಶ್ವಕ್ಕೆ ಏಕತೆ ಸಂದೇಶ ರವಾನೆ

ಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವವಿಖ್ಯಾತ ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಒಂದೆಡೆ ಸೇರಿ ಸಂಭ್ರಮದಿಂದ ಹೋಳಿ ಆಚರಿಸಿದರು. ಈ ಮೂಲಕ ಇಡೀ ವಿಶ್ವಕ್ಕೆ ಶಾಂತಿ, ಸೌಹಾರ್ದತೆ, ಏಕತೆ, ಸಹೋದರತ್ವದ ಸಂದೇಶ ಸಾರಿದರು.

ಕೊಪ್ಪಳದ ಸಾಣಾಪುರ ಘಟನೆ ಬಳಿಕ ಹಂಪಿಯಲ್ಲಿ ಈ ಬಾರಿ ಹೋಳಿ ಸಂಭ್ರಮ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕ ಸ್ಥಳೀಯರಲ್ಲೂ ಮನೆ ಮಾಡಿತ್ತು. ಈ ಕಹಿ ಘಟನೆ ಮರೆಸುವ ರೀತಿಯಲ್ಲಿ ಸ್ವಯಂಪ್ರೇರಿತರಾಗಿ ಹೋಳಿ ಹಬ್ಬದ ರಂಗಿನಾಟವನ್ನಾಡಲು ದೇಶ, ವಿದೇಶಿ ಪ್ರವಾಸಿಗರು ರಥಬೀದಿಯಲ್ಲಿ ಜಮಾಯಿಸಿದರು. ಈ ಮೂಲಕ ಸ್ಥಳೀಯರಲ್ಲೂ ಹುರುಪು ತಂದರು.ಕಾಮದಹನ:

ಹಂಪಿಯಲ್ಲಿ ಸ್ಥಳೀಯ ಯುವಕರು ಮಾ.14ರ ರಾತ್ರಿಯೇ ರಥಬೀದಿಯಲ್ಲಿ ಕಾಮದಹನ ಮಾಡಿದ್ದರು. ಬಳಿಕ ಮಾರನೇ ದಿನ ಶನಿವಾರ ಬೆಳಗ್ಗೆ 8 ಗಂಟೆಗೆ ದೇಶ, ವಿದೇಶಿ ಪ್ರವಾಸಿಗರು ಒಂದು ಕಡೆಯಲ್ಲಿ ಸೇರಿ ಹೋಳಿ ಆಚರಿಸಿದರು. ಆರಂಭದಲ್ಲಿ ಪೊಲೀಸರು ಮಹಿಳೆಯರು ಬೇರೆ ಕಡೆ ಆಡಿ, ಪುರುಷರು ಬೇರೆ ಕಡೆ ಆಡಿ ಎಂದು ಎರಡು ಕಡೆ ಅವಕಾಶ ನೀಡಿದ್ದರು. ಆದರೆ, ಬಣ್ಣದಾಟದಲ್ಲಿ ಎಲ್ಲರೂ ಒಂದೇ ಒಂದು ಎಲ್ಲರೂ ಜೊತೆಗೂಡಿಯೇ ಬಣ್ಣದಾಟ ಆಡಿದರು. ಹೋಳಿ ಹಬ್ಬದಲ್ಲಿ ತಾರತಮ್ಯ ಬೇಡ ಎಂಬ ಸಂದೇಶವನ್ನೂ ಬಣ್ಣದಾಟದ ಮೂಲಕವೇ ನೀಡಿದರು.ತಮಟೆ ನಾದಕ್ಕೆ ಕುಣಿತ:

ಹಂಪಿಯ ಜನತಾ ಪ್ಲಾಟ್‌ನಿಂದ ರಥಬೀದಿಗೆ ತಮಟೆ ನಾದಕ್ಕೆ ಹೆಜ್ಜೆ ಹಾಕುತ್ತಲೇ ಬಂದ ದೇಶ, ವಿದೇಶಿ ಪ್ರವಾಸಿಗರು, ಹ್ಯಾಪಿ ಹೋಳಿ ಎನ್ನುತ್ತಾ ಕುಣಿದು ಕುಪ್ಪಳಿಸಿದರು. ವಿದೇಶಿಗರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಬಳಿಕ ದೇಶಿ ಹಾಗೂ ಸ್ಥಳೀಯರು ಕೂಡ ಅವರ ಜೊತೆಗೂಡಿ ಹೋಳಿ ಹಬ್ಬ ರಂಗೇರಿಸಿದರು.

ರಥಬೀದಿಯಲ್ಲಿ ತಳ್ಳುಬಂಡಿಯಲ್ಲಿ ಮಾರಾಟ ಮಾಡುತ್ತಿದ್ದ ಬಣ್ಣದ ಪ್ಯಾಕೇಟ್‌ಗಳನ್ನು ಖರೀದಿಸಿದ ವಿದೇಶಿ ಪ್ರವಾಸಿಗರು, ಎದುರಿಗೆ ಬಂದವರ ಮುಖಕ್ಕೆ ಬಣ್ಣ ಎರಚುತ್ತಾ ಹ್ಯಾಪಿ ಹೋಳಿ ಎನ್ನುತ್ತಾ ಸಾಗಿದರು. ಸ್ಥಳೀಯ ಹುಡುಗರು, ಯುವಕರು, ಯುವತಿಯರು, ಮಹಿಳೆಯರು ಕೂಡ ವಿದೇಶಿಗರ ಮೇಲೆ ಬಣ್ಣ ಎರಚಿದರು. ಇದನ್ನು ಕಂಡ ದೇಶಿ ಪ್ರವಾಸಿಗರು ಕೂಡ ಬಣ್ಣ ಹಾಕಿ; ಓಕುಳಿ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದರು.

ಹೆಗಲುಗಳ ಮೇಲೆ ಮಕ್ಕಳನ್ನು ಎತ್ತಿಕೊಂಡು ತಮಟೆ ನಾದಕ್ಕೆ ಹೆಜ್ಜೆ ಹಾಕಿದ ದೇಶ, ವಿದೇಶಿ ಪ್ರವಾಸಿಗರು ಈ ಹಬ್ಬ ಎಲ್ಲರನ್ನೂ ಒಂದುಗೂಡಿಸುವ ಹಬ್ಬ ಆಗಿದೆ ಎಂಬ ಸಂದೇಶವನ್ನು ಕುಣಿತದ ಮುಖೇನ ನೀಡಿದರು.ಹೋಳಿ ಸಂಭ್ರಮ:

ಹಂಪಿ ರಥಬೀದಿಯಲ್ಲಿ ಅಮೆರಿಕ, ಇಂಗ್ಲೆಂಡ್‌, ರಶ್ಯ, ಇಟಲಿ, ಜರ್ಮನಿ, ಆಸ್ಟ್ರೇಲಿಯಾ, ಪೋರ್ಚುಗೀಸ್‌, ಇಸ್ರೇಲ್‌, ಬೆಲ್ಜಿಯಂ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರವಾಸಿಗರು ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇನ್ನೂ ದಿಲ್ಲಿ, ರಾಜಸ್ಥಾನ, ಛತ್ತಿಸ್‌ಗಡ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಬೆಂಗಳೂರು ಹಾಗೂ ಉತ್ತರ ಭಾರತದ ರಾಜ್ಯಗಳ ದೇಶಿ ಪ್ರವಾಸಿಗರು ಕೂಡ ಅವರಿಗೆ ಸಾಥ್‌ ನೀಡಿದರು.

ಹಂಪಿಯಲ್ಲಿ ಹೋಳಿ ಆಚರಣೆಗೆ ಮುಕ್ತ ಅವಕಾಶ ನೀಡಿರುವುದು ಪ್ರವಾಸೋದ್ಯಮ ಬೆಳವಣಿಗೆಗೂ ಸಹಕಾರಿ ಆಗಲಿದೆ. ನಮ್ಮಂಥವರು ಸ್ಥಳೀಯರ ಜೊತೆಗೂಡಿ ಹಬ್ಬ ಆಚರಣೆ ಮಾಡುವುದೇ ಸಂಭ್ರಮ ಎಂದು ಹೇಳುತ್ತಾರೆ ಬೆಲ್ಜಿಯಂ ಪ್ರವಾಸಿ ರೋಸಿ.

PREV

Recommended Stories

ಭವಿಷ್ಯದ ದೃಷ್ಟಿಯಿಂದ ಬೆಂಗ್ಳೂರು ಸಜ್ಜುಗೊಳಿಸಿ: ಮೋದಿ
ಕಾಯುವಿಕೆ ಅಂತ್ಯ । 19 ಕಿ.ಮೀ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗ ಮೆಟ್ರೋ - 25 ನಿಮಿಷಕ್ಕೆ 1 ರೈಲು