ಕಲಾವಿದರು ಆರ್ಟ್ ಗ್ಯಾಲರಿ ಸಮರ್ಪಕ ಬಳಸಿಕೊಳ್ಳಿ

KannadaprabhaNewsNetwork | Published : Mar 16, 2025 1:46 AM

ಸಾರಾಂಶ

ಚಿತ್ರಕಲೆ ಎಲ್ಲ ನೋವು ಮರೆಸುವ ಅದ್ಭುತವಾದ ಶಕ್ತಿ ಇರುವ ಕಲಾ ಸಾಧನವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಚಿತ್ರಕಲೆ ಎಲ್ಲ ನೋವು ಮರೆಸುವ ಅದ್ಭುತವಾದ ಶಕ್ತಿ ಇರುವ ಕಲಾ ಸಾಧನವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿ ನೇತೃತ್ವದಲ್ಲಿ ನಾಡಿನ ಹಿರಿಯ ಕಲಾವಿದ ದಿ. ಸಿ.ಬಿ.ಕಾಚಾಪುರ ೧೩ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಚಿತ್ರ ಮತ್ತು ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯದಲ್ಲೇ ಚಿತ್ರಕಲೆ ಆಸಕ್ತಿಯಿಂದ ಮಕ್ಕಳು ಹೆಚ್ಚು ವಿದ್ಯಾಭ್ಯಾಸದ ಕಡೆಗೆ ಆಕರ್ಷಿತರಾಗಿರುತ್ತಾರೆ. ಇದು ಸಮಾಜದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಕಲಾವಿದರು ಸಮಾಜಕ್ಕೆ ಮಾದರಿಯಾಗಿರುವ ನಾಗರಿಕರು. ಪ್ರಖ್ಯಾತ ಕಲಾವಿದ ಲಿಯೋನಾರ್ಡೋ ಡಾವಿಂಚಿ ರಚಿಸಿದ ಅವರ ಜಗತ್ ವಿಖ್ಯಾತ ಕಲಾಕೃತಿ ಮೊನಾಲಿಸಾ ಇವತ್ತಿಗೂ ತನ್ನ ಜನಪ್ರಿಯತೆ ಕಾಯ್ದುಕೊಂಡಿದೆ. ನಮ್ಮ ದೇಶದಲ್ಲಿಯೂ ರಾಜಾ ರವಿ ವರ್ಮರಂಥಹ ಅನೇಕ ಪ್ರಖ್ಯಾತ ಕಲಾವಿದರು ತಮ್ಮ ಕಲೆಯ ಮೂಲಕ ಖ್ಯಾತಿಗಳಿದ್ದಾರೆ. ಈ ಕಲಾ ಪ್ರದರ್ಶನದಲ್ಲಿ ನಮ್ಮ ಜಿಲ್ಲೆಯ ಕಲಾವಿದರ ಹಲವಾರು ವಿಷಯಗಳ ಕಲಾ ಕೃತಿಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತವೆ. ಈ ನಿಟ್ಟಿನಲ್ಲಿ ಕಲಾವಿದರು ತಮ್ಮ ಸೃಜನಶೀಲ ಅಭಿವ್ಯಕ್ತಿ ವ್ಯಕ್ತಪಡಿಸಲು ನಗರದಲ್ಲಿರುವ ಆರ್ಟ್ ಗ್ಯಾಲರಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಶ್ರೇಷ್ಠ ಕಲಾವಿದರಿದ್ದಾರೆ. ಜಿಲ್ಲೆಯಲ್ಲಿಯೂ ಹಲವಾರು ರಾಜ್ಯ, ರಾಷ್ಟ್ರಮಟ್ಟದ ಕಲಾವಿದರು ಕಲೆಯ ಮುಖಾಂತರ ತಮ್ಮ ಛಾಪು ಮೂಡಿಸಿದ್ದಾರೆ. ಇಲಾಖೆಯಿಂದ ಎಲ್ಲ ಕಲಾವಿದರಿಗೂ ಸಾಧ್ಯವಾದಷ್ಟು ಸಹಾಯ ನೀಡುವುದಾಗಿ ಭವರಸೆ ನೀಡಿದರು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ಅಧೀನದಲ್ಲಿರುವ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ನಿರಂತರವಾಗಿ ಕಲಾ ಚಟುವಟಿಕೆಗಳು ಹಮ್ಮಿಕೊಳ್ಳಲಾಗಿತ್ತು, ವಿಜಯಪುರ ಜಿಲ್ಲೆಯ ಕಲಾ ಪರಂಪರೆ ಯಶಸ್ವಿಯಾಗಿ ಮುನ್ನಡೆದಿದೆ. ಇದಕ್ಕೆಲ್ಲ ಕಾರಣೀಕರ್ತರಾದ ನಿವೃತ್ತ ಪ್ರಾಚಾರ್ಯರಾದ ದಿ. ಸಿ.ಬಿ. ಕಾಚಾಪುರವರು ಹಾಕಿಕೊಟ್ಟ ಮಾರ್ಗವೇ ಕಾರಣ, ಅವರು ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಆಡಳಿತಗಾರರಾಗಿದ್ದು ಶ್ರೇಷ್ಠ ಕಲಾವಿದರಾಗಿ ಕಲೆಯ ಮೂಲಕ ವಿಜಯಪುರವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಿದ್ದಾರೆ ಎಂದರು.

ಡಾ.ಜಿ.ಎಸ್.ಭೂಸಗೊಂಡ ಹಾಗೂ ಪಿ.ಎಸ್.ಕಡೇಮನಿ ಮಾತನಾಡಿದರು. ಪ್ರದರ್ಶನದಲ್ಲಿ ಕಲಾವಿದರಾದ ಪಿ.ಎಸ್.ಕಡೇಮನಿ, ಬಸವರಾಜ ಮಾಯಾಚಾರಿ, ವಿದ್ಯಾಧರ ಸಾಲಿ, ರಮೇಶ ಚವ್ಹಾಣ, ಶ್ರೀಶೈಲ ಹೂಗಾರ, ವರ್ಧಮಾನ ಕೇದ್ರಾಪುರ, ಗಂಗಾಧರ್ ಮಾಯಾಚಾರಿ, ಪ್ರಶಾಂತ ಮನಗೂಳಿ ಇದ್ದರು. ಇದೇ ವೇಳೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಶಿಲ್ಪಶ್ರೀ ಪ್ರಶಸ್ತಿ ಪುರಸ್ಕೃತ ಬಸವರಾಜ ಮಾಯಾಚಾರಿ ಹಾಗೂ ಕರ್ನಾಟಕ ಲಲಿತಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರಮೇಶ ಚವ್ಹಾಣರನ್ನು ಗೌರವಿಸಲಾಯಿತು.

ಡಾ.ಬಸವರಾಜ ಗವಿಮಠ, ಸಿದ್ದಲಿಂಗ ಫೈನ್ ಆರ್ಟ್ ಸಂಸ್ಥೆ ಕಾರ್ಯದರ್ಶಿ ಲಿಂಗರಾಜ್ ಕಾಚಾಪುರ, ಹಿರಿಯ ಕಲಾವಿದ ಎಸ್.ಟಿ.ಕೆಂಭಾವಿ, ವಿದ್ಯಾಧರ ಸಾಲಿ, ಎಂ.ಕೆ.ಪತ್ತಾರ, ಡಾ.ಜಿ.ಎಸ್.ಭೂಸಗೊಂಡ, ವಿ.ವಿ.ಹಿರೇಮಠ, ಮಂಜುನಾಥ ಮಾನೆ, ಮದನ ಒಗ್ಯಾನವರ, ಬಸವರಾಜ ಪ್ರಧಾನಿ, ಓಂಕಾರ, ಡಾ.ರವಿ ನಾಯಕ, ಗಿರಿಜಾ ಬಿರಾದಾರ, ದಾಕ್ಷಾಯಿಣಿ ಇಮನಾದ, ರಾಜೇಶ್ವರಿ ಕೌಲಗಿ, ಶಿವಾನಂದ ಅಥಣಿ, ಹಾಜಮಾ ಹುದ್ದಾರ, ವಿಶ್ವನಾಥ ಅಗಸರ್, ಮುರಳಿ ಬೋವಿ, ಸಹಿತ ಕಾಚಾಪುರ ಅವರ ಶಿಶ್ಯವರ್ಗ ಇತರರಿದ್ದರು. ಚಿತ್ರಕಲಾ ಶಿಕ್ಷಕರ ಕಮಲೇಶ ಭಜಂತ್ರಿ ನಿರೂಪಿಸಿದರು.

Share this article