ಹರಪನಹಳ್ಳಿ: ತಾಲೂಕಿನಾದ್ಯಂತ ಬುಧವಾರ ವಯಸ್ಸಿನ ಭೇದ ಭಾವವಿಲ್ಲದೇ ಮಹಿಳೆಯರು, ಪುರುಷರು ಅದರಲ್ಲೂ ಯುವ ಜನತೆ ಹೋಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಬಣ್ಣದಲ್ಲಿ ಮಿಂದೆದ್ದರು.ಮಂಗಳವಾರ ತಡರಾತ್ರಿ ತಾಲೂಕಿನ 29 ಕಡೆ ಇರಿಸಲಾಗಿದ್ದ ಕಾಮನ ಮೂರ್ತಿಗಳನ್ನು ದಹನ ಮಾಡಿ ಬುಧವಾರ ಬೆಳಿಗ್ಗೆ ಪರಸ್ಪರ ಬಣ್ಣ ಎರಚುವ ಕಾರ್ಯ ಆರಂಭಗೊಂಡಿತು.
ಡಿ.ಜಿ.ಧ್ವನಿ ವ್ಯವಸ್ಥೆಗೆ ಜನ ಮಾರು ಹೋಗಿದ್ದರು. ನಾ ಡ್ರೈವರ ಹಾಡು ಸೇರಿದಂತೆ ವಿವಿಧ ಹಾಡುಗಳಿಗೆ ಯುವಕರು ಬಣ್ಣವನ್ನು ಪರಸ್ಪರ ಎರೆಚಿ ಮೈ ಮರೆತು ಕುಣಿದು ಕುಪ್ಪಳಿಸಿದರು.
ಬೆಳಿಗ್ಗೆ 9.30ಕ್ಕೆ ಆರಂಭವಾದ ಮಳೆ ನೃತ್ಯ 11.45 ವರೆಗೂ ನಿರಂತರವಾಗಿ ಜರುಗಿತು.ಹೊಸಪೇಟೆ ರಸ್ತೆ, ಜೋಯಿಸರ ಓಣಿ,ಹಳೆ ಬಸ್ ನಿಲ್ದಾಣ, ಗೌಳೀರ ಬೀದಿ, ಮಠದಕೇರಿ, ವಾಲ್ಮೀಕಗಿ ನಗರ, ಸೊಂಡೂರುಗೇರಿ, ಕುರುಬಗೇರಿ, ಕೊಟ್ಟೂರು ರಸ್ತೆ, ಮೇಗಳಪೇಟೆ, ಮಟ್ಟೇರ ಓಣಿ, ಹರಿಹರ ವೃತ್ತ, ಮುಂತಾದ ಕಡೆ ಪರಸ್ಪರ ಬಣ್ಣ ಎರಚಿ ಹೋಳಿ ಸಂಭ್ರಮಿಸಿದರು. ಮಹಿಳೆಯರು, ಅದರಲ್ಲೂ ಯುವತಿಯರು, ಮಕ್ಕಳು ಸಹ ಬಣ್ಣದಲ್ಲಿ ಮಿಂದೆದ್ದರು.
ರೇನ್ ಡ್ಯಾನ್ಸ್ ಮೂಲಕ ನೃತ್ಯ ಮಾಡುತ್ತಾ ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬ ಆಚರಿಸಿದರೂ ಈ ಹಿಂದಿನ ವರ್ಷಗಳಿಗಿಂತ ಈ ಬಾರಿ ಹಬ್ಬ ಕಳೆಗುಂದಿದಂತಿತ್ತು. ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದರಿಂದ ಹಾಗೂ ಇದೇ 18ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದುದರಿಂದ ಯುವಕರ ಸಂಖ್ಯೆ ಕಡಿಮೆ ಇತ್ತು. ಹೆಚ್ಚು ಚಿಕ್ಕಮಕ್ಕಳು ಹಾಗೂ 20 ವರ್ಷ ಮೇಲ್ಪಟ್ಟವರು ಸ್ವಲ್ಪ ಮಟ್ಟಿಗೆ ಪಾಲ್ಗೊಂಡರು.
ವಿನಾಯಕ ಗೆಳೆಯರ ಬಳಗದ ಕಿರಣ್ ಶಾನ್ ಬಾಗ್, ಮಹೇಶ ಪೂಜಾರ, ಆದಿತ್ಯ, ಗೂಸರಿ ರಾಘು, ವಿನಾಯಕ ಭಜಂತ್ರಿ, ರವಿನಾಯ್ಕ, ಶಿರಗಾನಹಳ್ಳಿ ವಿಶ್ವನಾಥ, ಸೇರಿದಂತೆ ಅನೇಕರು ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡರು.