ಕಾರವಾರ: ನಗರದಲ್ಲಿ ಈ ಬಾರಿ ಹೋಳಿ ಸಂಭ್ರಮಾಚರಣೆ ಸ್ವಲ್ಪ ಕಳೆಗುಂದಿತ್ತು. ಸೋಮವಾರ ಎಸ್‌ಎಸ್‌ಎಲ್‌ಸಿ ಒಳಗೊಂಡು ಕೆಲವು ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಹೋಳಿ ಹಬ್ಬ ರಂಗು ಕಳೆದುಕೊಂಡಿತ್ತು.
ಬಣ್ಣದೋಕುಳಿಯಲ್ಲಿ ಮಿಂದೆದ್ದವರು ಅರಬ್ಬಿ ಸಮುದ್ರದಲ್ಲಿ ಸ್ನಾನ ಮಾಡುವ ವಾಡಿಕೆ ನಡೆದುಕೊಂಡು ಬಂದಿದ್ದು, ಪ್ರಸಕ್ತ ವರ್ಷ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಹೆಚ್ಚಿನ ಜನರು ಇರಲಿಲ್ಲ.
ನಗರದಲ್ಲಿ ಪೊಲೀಸರ ಕೊರತೆ ಎದ್ದು ಕಾಣುತ್ತಿತ್ತು. ಸಮುದ್ರ ಸ್ನಾನಕ್ಕೆ ತೆರಳಿದವರು ಮೋಜು ಮಸ್ತಿಯಲ್ಲಿ ತೊಡಗಿದ್ದರೆ ಅವರ ನಿಯಂತ್ರಣಕ್ಕೆ ಪೊಲೀಸರು ಇರಲಿಲ್ಲ. ಸಮುದ್ರದಲ್ಲಿ ಅಲೆಗಳ ಅಬ್ಬರವನ್ನೂ ಲೆಕ್ಕಿಸದೇ ಕೆಲವರು ದಡವನ್ನು ಬಿಟ್ಟು ಮುಂದೆ ಮುಂದೆ ಹೋಗುತ್ತಿದ್ದರು. ವಿದ್ಯಾರ್ಥಿಗಳ ಪರೀಕ್ಷೆ ಎನ್ನುವುದು ಈ ಬಾರಿಯ ರಂಗು ರಂಗಿನ ಬಣ್ಣದಾಟದ ಹಬ್ಬಕ್ಕೆ ರಂಗು ನೀಡಿರಲಿಲ್ಲ.ಬಣ್ಣದೋಕುಳಿಯಲ್ಲಿ ಮಿಂದೆದ್ದ ಹಳಿಯಾಳಪಟ್ಟಣದ ಸೇರಿದಂತೆ ಹಾಗೂ ಕೆಲವು ಗ್ರಾಮೀಣ ಭಾಗಗಳಲ್ಲಿ ಸೋಮವಾರ ಬಣ್ಣದ ಹಬ್ಬ ಹೋಳಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆದರೆ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಹಬ್ಬದಲ್ಲಿ ಪಾಲ್ಗೊಂಡಿಲ್ಲ.ಎಲ್ಲೆಡೆ ಬಣ್ಣದೋಕುಳಿ ನಡುವೆ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ, ಐದು, ಎಂಟು, ಒಂಬತ್ತು ಮತ್ತು ಹನ್ನೊಂದನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಆರಂಭಗೊಂಡಿದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತವಾಗಿ ಬಿಟ್ಟು ಬರುತ್ತಿರುವ ದೃಶ್ಯ ಕಂಡುಬಂತು. ಯುವಜನರು, ಮಕ್ಕಳು ಬೆಳಗ್ಗೆಯಿಂದಲೇ ರಸ್ತೆಗಿಳಿದು ಪರಸ್ಪರ ಬಣ್ಣದಾಟದಲ್ಲಿ ತೊಡಗಿ ಶುಭ ಕೋರಿ ಸಂಭ್ರಮಿಸಿದರು.ವಿವಿಧ ವೇಷ ಭೂಷಣಗಳನ್ನು ಧರಿಸಿದ ಯುವ ಸಮೂಹವು ಗುರುತು ಸಿಗದ ಹಾಗೇ ಮುಖಕ್ಕೆಲ್ಲ ಬಣ್ಣ ಮೆತ್ತಿಕೊಂಡು ಪಟ್ಟಣದಲ್ಲಿ ಸುತ್ತಾಡುತ್ತ, ಸ್ನೇಹಿತರಿಗೆ, ಪರಿಚಯಸ್ಥರಿಗೆ ಬಣ್ಣ ಹಚ್ಚಿ ಪರಸ್ಪರ ಶುಭಾಶಯ ಕೋರಿದರು. ಮಕ್ಕಳು ಸೇರಿದಂತೆ ಮಹಿಳೆಯರು ಮನೆಯ ವಠಾರದಲ್ಲಿಯೇ ಹಾಗೂ ಬಡಾವಣೆಗಳಲ್ಲಿ ಬಣ್ಣದೊಕುಳಿಯಲ್ಲಿ ಆಡಿ ಸಂಭ್ರಮಿಸಿದರು. ವಿವಿಧೆಡೆ ಯುವಸಮೂಹಕ್ಕೆ ಸಂಗೀತದೊಂದಿಗೆ ಬಣ್ಣದ ಜಲಸ್ನಾನ ಮಾಡಿ ಸಂಭ್ರಮಿಸಲು ವ್ಯವಸ್ಥೆ ಮಾಡಲಾಗಿತ್ತು. ಯುವಸಮೂಹ ಮತ್ತು ಮಕ್ಕಳು ಬಣ್ಣದ ನೀರಿನಲ್ಲಿ ನೆನೆಯುತ್ತಾ ಹೆಜ್ಜೆ ಹಾಕಿ ನಲಿದಾಡಿದರು. ಮಾಜಿ ಶಾಸಕ ಸುನೀಲ ಹೆಗಡೆ ಅವರು ತಮ್ಮ ಬೆಂಬಲಿಗರೊಂದಿಗೆ ಪಟ್ಟಣದೆಲ್ಲೆಡೆ ಸಂಚರಿಸಿ ಹೋಳಿಯಲ್ಲಿ ಪಾಲ್ಗೊಂಡರು.
ಭಟ್ಕಳದಾದ್ಯಂತ ಸಂಭ್ರಮದ ಹೋಳಿ ಹಬ್ಬಭಟ್ಕಳ ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾವಿನಕುರ್ವೆ ಬಂದರಿನಲ್ಲಿ ವರ್ಷಂಪ್ರತಿಯಂತೆ ಈ ಸಲವೂ ಹೋಳಿ ಹಬ್ಬವನ್ನು ಸಂಪ್ರದಾಯದಂತೆ ಸಡಗರದಿಂದ ಆಚರಿಸಲಾಯಿತು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಹೋಳಿ ಹಬ್ಬದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು. ಸಮುದ್ರ ತೀರದಲ್ಲಿ ತಲೆತಲಾಂತರದಿಂದ ಮಾಡಿಕೊಂಡು ಬಂದ ಪದ್ದತಿಯಂತೆ ಕಾಮದಹನ ಮಾಡಲಾಯಿತು. ಹೋಳಿ ಹಬ್ಬದ ಪ್ರಯುಕ್ತ ಎಲ್ಲೆಡೆ ಯುವಕರು ಬಣ್ಣ ಹಾಕುತ್ತಿರುವುದು ಕಂಡು ಬಂತು. ತಾಲೂಕಿನಲ್ಲಿ ಕುಂಬ್ರಿ ಮರಾಠಿ ಸಮಾಜದವರು ಹಿಂದಿನ ಸಂಪ್ರದಾಯದಂತೆ ಹೋಳಿ ಹಬ್ಬದ ಪ್ರಯುಕ್ತ ಮನೆ ಮನೆಗೆ ತೆರಳಿ ಡೆಕ್ಕೆ ಕುಣಿತ ಮಾಡಿ ಗಮನ ಸೆಳೆದರು. ಕೆಲವು ಕಡೆ ವಿವಿಧ ಸಮುದಾಯದ ಯುವಕರು ಮನೆಮನೆಗೆ ತೆರಳಿ ಕೋಲಾಟ ಮಾಡಿದರು. ಒಟ್ಟಾರೆ ತಾಲೂಕಿನಲ್ಲಿ ಬಣ್ಣಗಳ ಹಬ್ಬ ಹೋಳಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಣ್ಣಗಳ ಹಬ್ಬ ಎಂದೇ ಕರೆಯಲ್ಪಡುವ ಹೋಳಿ ಹಬ್ಬವನ್ನು ಸೋಮವಾರ ತಾಲೂಕಿನಾದ್ಯಂತ ಸಡಗರದಿಂದ ಆಚರಿಸಲಾಯಿತು.ಬಣ್ಣ ಎರಚುವುದು, ಮೆರವಣಿಗೆ, ವಿಭಿನ್ನ ನೃತ್ಯಗಳ ಮೂಲಕ ಯುವಕರು, ಮಕ್ಕಳು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.