ಈಶ್ವರ ಶೆಟ್ಟರ
ಐತಿಹಾಸಿಕ ಪರಂಪರೆಯುಳ್ಳ ಬಾಗಲಕೋಟೆಯ ಹೋಳಿ ಆಚರಣೆಗೆ ಶತಮಾನಗಳ ಇತಿಹಾಸವಿದ್ದು, ಪಶ್ಚಿಮ ಬಂಗಾಳದ ಕೋಲ್ಕತಾ ಹೊರತುಪಡಿಸಿದರೆ 5 ದಿನಗಳ ಕಾಲ ಹೋಳಿ ಆಚರಿಸುವ ಹೆಗ್ಗಳಿಕೆ ಬಾಗಲಕೋಟೆಯದ್ದಾಗಿದ್ದು, ಭಾವೈಕ್ಯತೆ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿರುವ ಬಾಗಲಕೋಟೆಯ ಹೋಳಿ ಹಬ್ಬ ಜಾತಿ, ಮತ, ಪಂಥಗಳನ್ನು ಮೀರಿ ಸಂಭ್ರಮದಿಂದ ಸಹಸ್ರಾರು ಜನ ಭಾಗವಹಿಸುವುದನ್ನು ನೋಡುವುದೇ ಸಂಭ್ರಮ.
ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರಿನಿಂದ ಬಾಧಿತವಾಗಿರುವ ಬಾಗಲಕೋಟೆ ನಗರ ಶೇ.60ರಷ್ಟು ಹಿನ್ನೀರಿನಲ್ಲಿ ಬಾಧಿತವಾಗಿದ್ದರೂ ಮುಳುಗಡೆಯ ಈ ನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಯ ಹೋಳಿ ಆಚರಣೆಗೆ ಮಾತ್ರ ಯಾವುದೇ ರೀತಿಯಲ್ಲೂ ಭಂಗವಾಗಿಲ್ಲ. ಕಾರಣ ಭಾವೈಕ್ಯತೆ ಬೆಸೆಯುವ ಹಬ್ಬವಾಗಿ ಆಚರಿಸುವ ನಗರದ ಜನತೆಯ ವಿಶಾಲ ಮನೋಭಾವ ಇದಕ್ಕೆ ಕಾರಣ ಎನ್ನಬಹುದು.ಸಂಪ್ರದಾಯದ ಹೋಳಿ ಆಚರಣೆ:ನೂರಾರು ವರ್ಷಗಳಿಂದ ಬಾಗಲಕೋಟೆಯ ಹೋಳಿ ಆಚರಿಸಲಾಗುತ್ತಿದ್ದು, 5 ಪ್ರಮುಖ ಓಣಿಗಳ 5 ವಿವಿಧ ಜಾತಿಗಳ ಮನೆತನಗಳು ಹೋಳಿಯ ಜವಾಬ್ದಾರಿ ನಿರ್ವಹಿಸುವುದರ ಜೊತೆಗೆ ದಲಿತ ಸಮುದಾಯದ ಖಾತೆದಾರ ಮನೆಯಿಂದಲೇ ಬೆಂಕಿ ತಂದು ಕಾಮದಹನ ಮಾಡುವ ವಾಡಿಕೆ ಇಲ್ಲಿದೆ.
ವಿಶಿಷ್ಟ ಆಚರಣೆ; ಪೇಶ್ವೆ ಆಡಳಿತ ಹಾಗೂ ಸವಣೂರು ನವಾಬರು ಬಾಗಲಕೋಟೆಯ ಹೋಳಿ ಆಚರಣೆಗೆ ವಿಶೇಷವಾದ ಗೌರವ ನೀಡಿದ್ದರೆಂದು ಹೇಳಲಾಗುತ್ತಿದ್ದು, ಅಸ್ಪೃಶ್ಯತೆಯ ಕಾಲದಲ್ಲಿಯೇ ಸಮಾನತೆ ತಂದ ಬಾಗಲಕೋಟೆಯ ಹೋಳಿ ಹಬ್ಬ ದಲಿತ ಮತ್ತು ಮೇಲ್ವರ್ಗದ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿ ದಲಿತ ಸಮುದಾಯದ ಮನೆಯಿಂದ ಬೆಂಕಿ ತಂದು ಕಾಮದಹನ ಮಾಡವ ಪರಂಪರೆಯಿದೆ.
ಇಂದಿನಿಂದ ಮೂರು ದಿನಗಳ ಬಣ್ಣದಾಟ: 5 ದಿನಗಳ ಹಬ್ಬದ ಆಚರಣೆಯಲ್ಲಿ 3 ದಿನಗಳ ಸತತ ಕಾಲ ಬಣ್ಣದಾಟ ನಡೆಯುವುದು ಬಾಗಲಕೋಟೆಯಲ್ಲಿ ಮಾತ್ರ, 3 ದಿನಗಳಲ್ಲಿ ನಗರದ ವಿವಿಧ ಬಡಾವಣೆಗಳಾದ ಕಿಲ್ಲಾ, ಹಳಪೇಟೆ, ಹೊಸಪೇಟೆ, ಜೈನಪೇಟೆ, ವೆಂಕಟಪೇಟೆಯ ಜನತೆ ವಿಶಿಷ್ಟ ರೀತಿಯಲ್ಲಿ ಬಣ್ಣದಾಟದಲ್ಲಿ ತೊಡಗುತ್ತಾರೆ. ಈ ಬಾರಿ ಬಣ್ಣದಾಟವನ್ನು ಮತ್ತಷ್ಟು ರಂಗಿನಿಂದ ಆಡಲು ಸಜ್ಜಾಗಿದ್ದಾರೆ. ಜೊತೆಗೆ ಮಾ.25 ರಿಂದ ಮುರು ದಿನಗಳ ಕಾಲ ರೇನ್ ಡ್ಯಾನ್ಸ್ ಹಾಗೂ ಬಣ್ಣದ ಬಂಡಿಗಳು ಸಹ ಹೋಳಿಯ ರಂಗ ಹೆಚ್ಚಿಸಲಿದೆ.
- ಮಹಾಬಳೇಶ್ವರ ಗುಡುಗುಂಟಿ, ಹೋಳಿ ಆಚರಣೆ ಸಮಿತಿ ಮುಖ್ಯಸ್ಥರು