ಗಾಳಿಯರ್ ಕಾಮ, ಕಂಡೇರ್ ಕಾಮ, ದೈವದಕಾಮ ಹಾಗೂ ಸರ್ಕಾರಿ ಕಾಮ ಸೇರಿ ನಾಲ್ಕು ಕಡೆಗಳಲ್ಲಿ ಸ್ಥಾಪಿಸಲ್ಪಡುವ ಕಾಮನನನ್ನು ನೆಲ್ಲು ಹುಲ್ಲಿನಿಂದ ತಯಾರಿಸಿ ಅದಕ್ಕೆ ವಸ್ತ್ರ ಹಾಗೂ ಆಭರಣಗಳಿಂದ ಅಲಂಕರಿಸಿ ಬಣ್ಣದ ಮುಖವಾಡ ತೊಡಸಿ ಕೂಡಿಸಿದ್ದಾರೆ.
ಶಿವಮೂರ್ತಿ ಇಟಗಿ
ಯಲಬುರ್ಗಾ:
ಪಟ್ಟಣದ ವಿವಿಧೆಡೆ ಕಾಮಣ್ಣನನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಆಚರಣೆಗೆ ಬುಧವಾರ ರಾತ್ರಿ ಅದ್ಧೂರಿ ಚಾಲನೆ ದೊರೆತಿದೆ.
ಪಟ್ಟಣದಲ್ಲಿ ವಿಶಿಷ್ಟ ರೀತಿಯಲ್ಲಿ ಹೋಳಿ ಹಬ್ಬ ಆಚರಿಸುತ್ತಿದ್ದು ಹಬ್ಬ ನೋಡಲು ವಿವಿಧ ಗ್ರಾಮಗಳ ಜನರು ಇಲ್ಲಿಗೆ ತಂಡೋಪ ತಂಡವಾಗಿ ಬರುತ್ತಾರೆ. ಬುಧವಾರ ರಾತ್ರಿ ಕಾಮಣ್ಣನನ್ನು ಪ್ರತಿಷ್ಠಾಪಿಸುವ ಮೂಲಕ ಆರಂಭಗೊಂಡ ಹೋಳಿ ಹಬ್ಬ ಶನಿವಾರ ಬೆಳಗ್ಗೆ ಕಾಮದಹನ, ಮಧ್ಯಾಹ್ನ ಬಣ್ಣದೋಕುಳಿ ನಡೆದು ಅಂತ್ಯಗೊಳ್ಳಲಿದೆ.
ಗಾಳಿಯರ್ ಕಾಮ, ಕಂಡೇರ್ ಕಾಮ, ದೈವದಕಾಮ ಹಾಗೂ ಸರ್ಕಾರಿ ಕಾಮ ಸೇರಿ ನಾಲ್ಕು ಕಡೆಗಳಲ್ಲಿ ಸ್ಥಾಪಿಸಲ್ಪಡುವ ಕಾಮನನನ್ನು ನೆಲ್ಲು ಹುಲ್ಲಿನಿಂದ ತಯಾರಿಸಿ ಅದಕ್ಕೆ ವಸ್ತ್ರ ಹಾಗೂ ಆಭರಣಗಳಿಂದ ಅಲಂಕರಿಸಿ ಬಣ್ಣದ ಮುಖವಾಡ ತೊಡಸಿ ಕೂಡಿಸಿದ್ದಾರೆ. ಪಕ್ಕದಲ್ಲಿ ರತಿದೇವಿ ಹಾಗೂ ಭೀಮನನ್ನು ಕೂರಿಸುವ ಪದ್ಧತಿ ಇದೆ.
ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನ ಜಾವದ ವರೆಗೆ ಕಳಬೇಡದ ನರ್ತನ ನೋಡುಗರನ್ನು ಆಕರ್ಷಿಸುತ್ತದೆ. ಕಳಬೇಡ ಎನ್ನುವ ರಾಕ್ಷಸ ವೇಷಧರಿಸಿ ತಮ್ಮದೇ ಶೈಲಿಯಲ್ಲಿ ಹೆಚ್ಚೆ ಕುಣಿತದಿಂದ ಜನರನ್ನು ರಂಜಿಸುತ್ತಾರೆ. ಇದರ ಹಿಂದೆ ಕೆಲವರು ಹೆಣದ ಬಂಡಿ ಮಾಡಿ ಪುರುಷರು ಹೆಣ್ಣು ವೇಷಧಾರಿಯಾಗಿ ಅಳುತ್ತಾ ಸಾಗುವುದು ಇಲ್ಲಿಯ ಸಂಪ್ರಾದಾಯ.
ಬೆಳಗ್ಗೆ ಕಾಮದಹನ:
ಶನಿವಾರ ಬೆಳಗ್ಗೆ ೭.೩೦ಕ್ಕೆ ನಾಲ್ಕು ಕಾಮದವರು ಮೊದಲಿಗೆ ದೈವದ ಕಾಮನನ್ನು ಸುಡಲು ಅದರ ಅಧಿಕೃತ ಸ್ಥಳಕ್ಕೆ (ಉಸುಕಿನ ಕಟ್ಟೆ)ಗೆ ಬಂದು ಸೇರುತ್ತಾರೆ. ಆಗ ದೈವದ ಕಾಮದವರು ಕದ್ದು ಹಾಕಿರುವ ಕಟ್ಟೆಗೆ ಹಾಗೂ ಕುಳ್ಳಗಳ ರಾಶಿಯನ್ನು ೫ ಸುತ್ತು ಹಾಕಿ ಕಾಮನ ಮುಖವಾಡ ತೆಗೆದು ಆ ಜಾಗಕ್ಕೆ ಗಡುಗೆ ಇಡುತ್ತಾರೆ. ತಕ್ಷಣವೇ ಕಾಮಣ್ಣನಿಗೆ ಬೆಂಕಿ ಇಡುತ್ತಾರೆ. ಇದಾದ ನಂತರವೇ ಉಳಿದ ಕಾಮದವರು ತಮ್ಮ ಸ್ಥಳಕ್ಕೆ ಹೋಗಿ ಅಲ್ಲಿಯೂ ಇದೇ ಪದ್ಧತಿ ಅನುಸರಿಸಿ ಸುಡುತ್ತಾರೆ. ನೆರೆದಿದ್ದ ಜನರು ಅಲ್ಲಿಯ ಬೆಂಕಿಯನ್ನು ಮನೆಗೆ ತಂದು ಕಡಲೆ ಕಾಳು ಸುಟ್ಟು ತಿನ್ನುತ್ತಾರೆ. ಕಾಮ ಸುಟ್ಟ ಬೂದಿಯನ್ನು ರೈತರು ತಮ್ಮ ಹೊಲದಲ್ಲಿ ಚೆಲ್ಲುತ್ತಾರೆ. ಕಾಮಣ್ಣನನ್ನು ದಹಿಸಿದ ಬಳಿಕ ಪಟ್ಟಣದ ಪುರುಷರು, ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು ಮನೆ-ಮನೆಗೆ ಸುತ್ತಿ ಬಣ್ಣದೋಕುಳಿಯಲ್ಲಿ ನಿರತರಾಗುತ್ತಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.