ಬಲಮುರಿ ಅಗಸ್ತೇಶ್ವರ ದೇವಾಲಯದಲ್ಲಿ ಪುಣ್ಯ ತೀರ್ಥಸ್ನಾನ, ಜಾತ್ರಾ ಮಹೋತ್ಸವ

KannadaprabhaNewsNetwork |  
Published : Oct 19, 2026, 02:45 AM IST
ಮಹೋತ್ಸವ | Kannada Prabha

ಸಾರಾಂಶ

ಸಮೀಪದ ಇತಿಹಾಸ ಪ್ರಸಿದ್ಧ ಬಲಮುರಿ (ಬಲಂಬೇರಿ) ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಭಾನುವಾರ ಕಾವೇರಿ ನದಿಗೆ ನೆರವೇರಿದ ಮಹಾ ಮಂಗಳಾರತಿಯೊಂದಿಗೆ, ಪುಣ್ಯ ತೀರ್ಥಸ್ನಾನ ಜಾತ್ರಾ ಮಹೋತ್ಸವ ಶ್ರದ್ಧಾ-ಭಕ್ತಿ ಮತ್ತು ವಿಜೃಂಭಣೆಯಿಂದ ಸಂಪನ್ನಗೊಂಡಿತು.

ದುಗ್ಗಳ ಸದಾನಂದ ನಾಪೋಕ್ಲು : ಸಮೀಪದ ಇತಿಹಾಸ ಪ್ರಸಿದ್ಧ ಬಲಮುರಿ (ಬಲಂಬೇರಿ) ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಭಾನುವಾರ ಕಾವೇರಿ ನದಿಗೆ ನೆರವೇರಿದ ಮಹಾ ಮಂಗಳಾರತಿಯೊಂದಿಗೆ, ಪುಣ್ಯ ತೀರ್ಥಸ್ನಾನ ಜಾತ್ರಾ ಮಹೋತ್ಸವ ಶ್ರದ್ಧಾ-ಭಕ್ತಿ ಮತ್ತು ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಕಾವೇರಿ ಸಂಕ್ರಮಣದಂದು ತಲಕಾವೇರಿಯಲ್ಲಿ ಪುಣ್ಯ ತೀರ್ಥಸ್ನಾನ ಮಾಡಿ ಹಾಗೂ ಮಾಡದಿರುವ ಭಕ್ತಾದಿಗಳು, ಮರುದಿನ ಎರಡನೆಯ ಪುಣ್ಯ ತೀರ್ಥಸ್ನಾನವನ್ನು ಬಲಮುರಿಯಲ್ಲಿ ಮಾಡುವುದು ತಲತಲಾಂತರಗಳಿಂದ ನಡೆದುಬಂದ ಪದ್ಧತಿಯಾಗಿದೆ. ಅದರಂತೆ ಭಾನುವಾರ ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು, ವಿಶೇಷ ಪೂಜಾ ವಿಧಿ-ವಿಧಾನಗಳನ್ನು ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಧಾರ್ಮಿಕ ವಿಧಿ-ವಿಧಾನಗಳು:ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ಕೇಶ ಮುಂಡನ, ಪಿಂಡಪ್ರದಾನ, ಕಾವೇರಿ ತೀರ್ಥಸ್ನಾನ ಹಾಗೂ ‘ಕಾವೇರಿಯ ಬಾಲೋಪಾಟ್’ ಮುಂತಾದ ಧಾರ್ಮಿಕ ಕಾರ‍್ಯಕ್ರಮಗಳು ಜರುಗಿದವು. ಮಧ್ಯಾಹ್ನ 12 ಗಂಟೆಗೆ ಕಾವೇರಿ ನದಿಗೆ ಮಹಾ ಮಂಗಳಾರತಿ ಮತ್ತು ವಿಶೇಷ ಪೂಜೆಗಳನ್ನು ಕ್ಷೇತ್ರದ ಅರ್ಚಕ ಮಹಾಬಲೇಶ್ವರ ಭಟ್ ಹಾಗೂ ಸಹವರ್ತಿಗಳು ನೆರವೇರಿಸಿದರು.

ಬಳಿಕ ನದಿಯಿಂದ ಪವಿತ್ರ ನೀರನ್ನು ಅರ್ಚಕರು ಬಿಂದಿಗೆಯಲ್ಲಿ ತುಂಬಿ, ಚಂಡೆ ಮೇಳಗಳೊಂದಿಗೆ ದೇವಾಲಯಕ್ಕೆ ಕೊಂಡೊಯ್ದು ದೇವರ ಪ್ರತಿಬಿಂಬಕ್ಕೆ ಅಭಿಷೇಕ ಮಾಡಿದರು. ಅನಂತರ ವಿಶೇಷ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಆಗಮಿಸಿದ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.ಕ್ಷೇತ್ರ ಅಭಿವೃದ್ಧಿಗೆ ಕಾವೇರಿ ನೀರಾವರಿ ನಿಗಮಕ್ಕೆ ಒಳಪಡಿಸಲು ಮನವಿ:

ಹಬ್ಬದ ಪ್ರಯುಕ್ತ ಜರುಗಿದ ಕಾರ‍್ಯಕ್ರಮಗಳ ಕುರಿತು ಮಾಹಿತಿ ನೀಡಿದ ದೇವಾಲಯದ ತಕ್ಕರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾದ ಕೊಂಗೀರಂಡ ಸಾದು ತಮ್ಮಯ್ಯ, ‘ಅಗಸ್ತ್ಯ ಮಹರ್ಷಿಗಳು ಪೂಜಿಸಿದ ಈ ಪವಿತ್ರ ಕ್ಷೇತ್ರವು ಅತ್ಯಂತ ಪ್ರಾಮುಖ್ಯತೆ ಹೊಂದಿದ್ದರೂ ಸೂಕ್ತ ಅಭಿವೃದ್ಧಿ ಕಂಡಿಲ್ಲ. ಭಾಗಮಂಡಲದ ತ್ರಿವೇಣಿ ಸಂಗಮದ ಮಾದರಿಯಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಬಲಮುರಿಯನ್ನು ಉನ್ನತೀಕರಿಸಿ ಅಭಿವೃದ್ಧಿಪಡಿಸುವ ಭರವಸೆಯನ್ನು ಶಾಸಕರು ಕಳೆದ ಬಾರಿ ನೀಡಿದ್ದರು. ಈ ಕಾರ‍್ಯ ಶೀಘ್ರ ಈಡೇರಬೇಕಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ ಮಾತನಾಡಿ, ‘ಬಲಮುರಿ ಕೊಡಗು ಜಿಲ್ಲೆಯ ಎರಡನೇ ಪುಣ್ಯಕ್ಷೇತ್ರ. ಇಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ಕ್ಷೇತ್ರವನ್ನು ಕಾವೇರಿ ನೀರಾವರಿ ನಿಗಮಕ್ಕೆ ಒಳಪಡಿಸಿದರೆ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ನೀಡಿದ್ದ ಅಭಿವೃದ್ಧಿಯ ಭರವಸೆ ಈಡೇರಬೇಕು’ ಎಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಅಗಸ್ತೇಶ್ವರ ದೇವಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಪೊನ್ನಚ್ಚನ ಜಯ, ಖಜಾಂಜಿ ಆಂಗಿರ ಸಂತೋಷ್, ಬೊಳ್ಳಚೆಟ್ಟಿರ ಅಚ್ಚಪ್ಪ, ಅನ್ನದಾನ ಸಮಿತಿ ಅಧ್ಯಕ್ಷ ಬೊಳ್ಳಚೆಟ್ಟಿರ ವಿಜಯ್ ಚೆಟ್ಟಿಚ್ಚ, ಉಪಾಧ್ಯಕ್ಷ ಪಾಲಂದಿರ ಚಂಗಪ್ಪ, ಬೊಳ್ಳಚೆಟ್ಟಿರ ಸುರೇಶ್, ಕುಂದನ ಪ್ರಭಾನಂದ ಸೇರಿದಂತೆ ದೇವಾಲಯ ಆಡಳಿತ ಮಂಡಳಿ, ಅನ್ನದಾನ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಊರ-ಪರಊರಿನ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನದಿಂದ ಪ್ರೌಢ ವ್ಯಕ್ತಿತ್ವ ರೂಪು: ರಮೇಶ್ ಭಟ್ ಎಸ್.ಜಿ
ನಾಪೋಕ್ಲು ಸುತ್ತಮುತ್ತ ಬಿರುಸಿನ ಮಳೆ: ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ಅಡಚಣೆ