ಕನ್ನಡಪ್ರಭ ವಾರ್ತೆ ನಾಗಮಂಗಲ
ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಶ್ರೀಕಾಲಭೈರವೇಶ್ವರನ ಪೂಜಾ ಮಹೋತ್ಸವಗಳು ಬಹಳ ವಿಜೃಂಭಣೆಯಿಂದ ನೆರವೇರಿದವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭೈರವ ಮಾಲಾಧಾರಿಗಳು ಶ್ರೀಮಠಕ್ಕೆ ಕಾಲ್ನಡಿಗೆಯಲ್ಲಿ ಬಂದು ಕಾಲಭೈರವನ ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಪ್ರತಿವರ್ಷದಂತೆ ಈ ವರ್ಷವೂ ಶ್ರೀಮಠಕ್ಕೆ ಆಗಮಿಸಿದ ಸಾವಿರಾರು ಮಂದಿ ಭೈರವ ಮಾಲಾಧಾರಿಗಳು ಗುರುವಾರ ರಾತ್ರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮಿಜಿ ಹಾಗೂ ಶ್ರೀಮಠದ ಯತಿಗಳ ನೇತೃತ್ವದಲ್ಲಿ ಗಿರಿ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡ ನಂತರ ತಾವು ತಂದಿದ್ದ ಹಿರಿಮುಡಿಯನ್ನು ದೇವರ ಸನ್ನಿಧಾನಕ್ಕೆ ಸಮರ್ಪಿಸಿದರು.ಶ್ರೀಕಾಲಭೈರವಾಷ್ಟಮಿ ಪ್ರಯುಕ್ತ ಶುಕ್ರವಾರ ಮುಂಜಾನೆ ಕ್ಷೇತ್ರಪಾಲಕ ಕಾಲಭೈರವೇಶ್ವರಸ್ವಾಮಿ ಮೂರ್ತಿಗೆ ಶ್ರೀಗಳು ಪಂಚಾಮೃತಾಭಿಷೇಕ, ಭಸ್ಮಾಭಿಷೇಕ, ಬಿಲ್ವಾಭಿಷೇಕ, ಪುಷ್ಪಾಭಿಷೇಕ, ಸುಗಂಧ ದ್ರವ್ಯಾದಿಗಳೊಂದಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು. ಪೂಜೆ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿತು. ಈ ವೇಳೆ ಭೈರವ ಮಾಲಾಧಾರಿಗಳು ತಾವು ಭಕ್ತಿಯಿಂದ ತಂದಿದ್ದ ದವಸ ಧಾನ್ಯಗಳನ್ನು ಶ್ರೀಮಠಕ್ಕೆ ನೀಡುವ ಮೂಲಕ ತಮ್ಮ ಭಕ್ತಿಭಾವ ಮೆರೆದರು.ಶ್ರೀಕಾಲಭೈರವಾಷ್ಟಮಿ ವಿಶೇಷ ದಿನದಂದು ಡಾ.ನಿರ್ಮಲಾನಂದನಾಥ ಶ್ರೀಗಳು ಬೃಹತ್‌ಕೇಕ್ ಕತ್ತರಿಸುವ ಮೂಲಕ ಭೈರವಾಷ್ಟಮಿಯನ್ನು ಆಚರಿಸಿ ಆಶೀರ್ವಚನ ನೀಡಿದರು. ರಾಜ್ಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಸೋಮನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಸಹಸ್ರಾರು ಮಂದಿ ಭಕ್ತರು ಇದ್ದರು.ನಿರ್ದಿಗಂತದಲ್ಲಿ ಎರಡು ದಿನ ಮಕ್ಕಳ ಹಬ್ಬ - 2025
ಕನ್ನಡಪ್ರಭ ವಾರ್ತೆ ಮೈಸೂರುನಿರ್ದಿಗಂತದ ಶಾಲಾರಂಗ ವಿಕಾಸ ಯೋಜನೆಯ ಮಕ್ಕಳ ಹಬ್ಬ 2025 ಕಾರ್ಯಕ್ರಮವು ಡಿ. 13 ಮತ್ತು 14 ರಂದು ಶ್ರೀರಂಗಪಟ್ಟಣದ ಕೆ. ಶೆಟ್ಟಿಹಳ್ಳಿಯಲ್ಲಿ ಬೆಳಗ್ಗೆ 11 ರಿಂದ ರಾತ್ರಿ 8.30 ರವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ, ನಟ ಪ್ರಕಾಶ್‌ರಾಜ್ ಪಾಲ್ಗೊಲ್ಳುವರು.ಡಿ. 13 ರಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ದೊರಕುವುದು. ಅಂದು ಮಧ್ಯಾಹ್ನ 12 ಗಂಟೆಗೆ ತುಂಗಾ ನಾಟಕವನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಪ್ರಸ್ತುತಪಡಿಸುವರು. ಸಂಜೆ 4 ಗಂಟೆಗೆ ಕುವೆಂಪು ಅವರ ಚಂದ್ರಹಾಸ ನಾಟಕವನ್ನು ಹೊನ್ನಾವರದ ಅಳಂಕಿಯ ಡಾ.ಬಿ.ಅರ್. ಅಂಬೇಡ್ಕರ್ ವಸತಿ ಶಾಲೆ ಮಕ್ಕಳು ಪ್ರಸ್ತುತಪಡಿಸುವರು.
ಸಂಜೆ 5.30ಕ್ಕೆ ರಂಗಗೀತೆ, ಕಥೆ, ಕವನಗಳ ಪ್ರಸ್ತುತಿ ಇರುತ್ತದೆ. ಸಂಜೆ 7 ಗಂಟೆಗೆ ರೂಪಾಂತರ ನಾಟಕವನ್ನು ಮೈಸೂರಿನ ಕಲಿಯುವ ಮನೆ ಕಲಾವಿದರು ಪ್ರಸ್ತುತಪಡಿಸುವರು.ಡಿ. 14 ರಂದು ಬೆಳಗ್ಗೆ 10ಕ್ಕೆ ಸಂಗ ಜಮ್ಮ ನಾಟಕವನ್ನು ಮಿಳಂದ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸುವರು. 11.30ಕ್ಕೆ ರಂಗಗೀತೆ, ಕಥೆ, ಕವನ ಪ್ರಸ್ತುತಿ ಇರುತ್ತದೆ. ಮಧ್ಯಾಹ್ನ 12.30ಕ್ಕ ದೊಡ್ಮಾರಿ- ಚಿಕ್ಮಾರಿ ನಾಟಕವನ್ನು ಅಳ್ಳಂಕಿಯ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮಕ್ಕಳು ಪ್ರದರ್ಶಿಸಲಿದ್ದು, ಮಧ್ಯಾಹ್ನ 3 ಗಂಟೆಗೆ ಮೃಗ ಮತ್ತು ಸುಂದರಿ ನಾಟಕವನ್ನು ಬ್ರಹ್ಮಾವರ ತಾಲೂಕಿನ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಪ್ರಸ್ತುತಪಡಿಸುವರು. ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ.