ಕನ್ನಡಪ್ರಭ ವಾರ್ತೆ ಭಾಲ್ಕಿ
ಪಟ್ಟಣದ ಚನ್ನಬಸವಾಶ್ರಮ ಪರಿಸರದ ಹರ್ಡೇಕರ ಮಂಜಪ್ಪನವರ ವೇದಿಕೆಯಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ. ಚನ್ನಬಸವ ಪಟ್ಟದ್ದೇವರ 134ನೇ ಜಯಂತ್ಯುತ್ಸವ ಮತ್ತು ಮೂರ್ತಿ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನವನ್ನು ಪಟ್ಟದ್ದೇವರು ತಮ್ಮ ಜೀವನದಲ್ಲಿ ಅಕ್ಷರಶಹಃ ಪಾಲಿಸಿಕೊಂಡು ಬಂದಿದ್ದರು. ಗಡಿ ಭಾಗದಲ್ಲಿ ಪಟ್ಟದ್ದೇವರು ಅನೇಕ ವಿಧಾಯಕ ಕಾರ್ಯಗಳು ಅಚ್ಚಳಿಯದಂತೆ ಮಾಡಿದ್ದಾರೆ. ಜೀವನದುದ್ದಕ್ಕೂ ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ ಕ್ಷೇತ್ರಗಳ ಸೇವೆಯ ಮೂಲಕ ಅದ್ಭುತ ಕ್ರಾಂತಿಗೈದಿದ್ದಾರೆ. ಬಸವಾದಿ ಶರಣರಂತೆ ಪಟ್ಟದ್ದೇವರು ಕೂಡ ಕಾಯಕಕ್ಕೆ ಹೆಚ್ಚು ಆದ್ಯತೆ ಪ್ರಾತಿನಿಧ್ಯ ನೀಡಿದ್ದರು ಎಂದರು.ಸಚಿವ ರಹೀಮ್‌ಖಾನ್ ಮಾತನಾಡಿ, ಬಸವಣ್ಣನವರ, ಪಟ್ಟದ್ದೇವರ ವಿಚಾರಧಾರೆ ಒಂದೆಯಾಗಿವೆ. ಅಂತಹ ಮಹಾತ್ಮರ ತತ್ವಗಳು ಪ್ರತಿಯೊಬ್ಬರು ಪಾಲಿಸಬೇಕು. ಪಟ್ಟದ್ದೇವರು ಈ ಭಾಗದಲ್ಲಿ ಮಾಡಿರುವ ಶೈಕ್ಷಣಿಕ ಕ್ರಾಂತಿ ಮಾದರಿ ಎನಿಸಿದೆ ಎಂದರು.
ನೇತೃತ್ವ ವಹಿಸಿದ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಂಡವರಲ್ಲಿ ಪಟ್ಟದ್ದೇವರು ಮೊದಲಿಗರು. ಮಠದ ಸಂಪ್ರದಾಯವನ್ನು ಮುರಿದು ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಿ ಬಸವತತ್ವದ ಮಹತ್ವ ಸಾರಿದ ಮಹಾನ್ ಚೇತನ. ಪಟ್ಟದ್ದೇವರು ಬಸವತತ್ವ-ಕನ್ನಡ ಎರಡು ಕಣ್ಣಾಗಿಸಿಕೊಂಡು ಈ ಭಾಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ.ಗುರುಪ್ರಸಾದ, ಕಾಯಕ ಪ್ರಶಸ್ತಿ ಪುರಸ್ಕೃತ ಶಿವಶರಣಪ್ಪ ಹುಗ್ಗೆ ಪಾಟೀಲ್ ಮಾತನಾಡಿದರು. ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕ ವಿ. ಸಿದ್ಧರಾಮಣ್ಣ ಶರಣರು ಸಮ್ಮುಖ ವಹಿಸಿದರು.
ಇದೇ ವೇಳೆ ಬೀದರ್ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕ ಶಿವಶರಣಪ್ಪ ಹುಗ್ಗೆ ಪಾಟೀಲ್ ಅವರಿಗೆ 2023ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿದರು. ಮಲ್ಲಮ್ಮ ನಾಗನಕೇರೆ ವಂದಿಸಿದರು.