ಕನ್ನಡಪ್ರಭ ವಾರ್ತೆ ಮೂಲ್ಕಿ
ರಾಜ್ಯ ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಪರಿಶೀಲಿಸಿದರು. ನಂತರ ನಾಗರಿಕರ ದೂರಿನ ಅನ್ವಯ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಈ ಸಂದರ್ಭ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತು ಭಾವ ಮಾತನಾಡಿ, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ, ವೈದ್ಯಾಧಿಕಾರಿಗಳ ಉಡಾಫೆ ವರ್ತನೆ ಬಗ್ಗೆ ನಮಗೆ ನಾಗರಿಕರು ದೂರು ನೀಡುತ್ತಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನಡುವೆ ಹೊಂದಾಣಿಕೆ ಕೊರತೆ ಇದೆ. ಇದಕ್ಕೆ ರೋಗಿಗಳು ಬಲಿಪಶುಗಳಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಉಲ್ಲೇಖಿಸಲಾಗಿದೆ, ಇದು ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಬಳಿಕ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಸಚಿವರು ಆಸ್ಪತ್ರೆಯ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡು ಆಸ್ಪತ್ರೆಗೆ ಬರುವ ರೋಗಿಗಳ ಜೊತೆ ವಿನಯತೆಯಿಂದ ವರ್ತಿಸಿ ಎಂದು ಕಿವಿಮಾತು ಹೇಳಿದರು.ಆಸ್ಪತ್ರೆಯ ಸಿಬ್ಬಂದಿ ಕೊರತೆಯನ್ನು ಕೂಡಲೇ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಜನವರಿಯಲ್ಲಿ ಆರಂಭಿಸಲಾಗವುದು. ಆಸ್ಪತ್ರೆಗೆ ಹೆರಿಗೆ ತಜ್ಞರ ನೇಮಕ ಮಾಡಲಾಗುವುದು. ಆಸ್ಪತ್ರೆಗೆ 2 ಡಯಾಲಿಸಿಸ್ ಯಂತ್ರಗಳನ್ನು ಕೂಡಲೇ ಮಂಜೂರು ಮಾಡಲಾಗುವುದು, ಆಸ್ಪತ್ರೆಯ ಎಕರೆಗಟ್ಟಲೆ ಜಾಗ ಒತ್ತುವರಿ ಬಗ್ಗೆ ಕೂಡಲೇ ಸರ್ವೆ ನಡೆಸಿ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು.
ತಾಲೂಕು ವ್ಯಾಪ್ತಿಯಲ್ಲಿ ಕೆ.ಎಸ್. ರಾವ್ ನಗರದಲ್ಲಿ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡಿನಲ್ಲಿ ನಮ್ಮ ಕ್ಲಿನಿಕ್ ಮಂಜೂರಾಗಿದ್ದು, ಕೂಡಲೇ ಕಾರ್ಯಪ್ರವೃತ್ತವಾಗಲಿದೆ. ಮೂಲ್ಕಿ ತಾಲೂಕಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದರು.ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಡಿಎಚ್ಒ ಡಾ. ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಆರೋಗ್ಯ ಸಚಿವ ಹಾಗೂ ದ .ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೂಲ್ಕಿ ಸೀಮೆಯ ಅರಮನೆಗೆ ಶುಕ್ರವಾರ ಭೇಟಿ ನೀಡಿ ಭಾನುವಾರ ನಡೆಯುವ ಮೂಲ್ಕಿ ಸೀಮೆಯ ಅರಸು ಕಂಬಳದ ಇತಿಹಾಸದ ಬಗ್ಗೆ ಮಾಹಿತಿ ಪಡೆದರು.ಮುಲ್ಕಿ ಅರಮನೆ ವತಿಯಿಂದ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಸಚಿವರನ್ನು ಗೌರವಿಸಿದರುವಿಜಯ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ ಕೋಲ್ನಾಡ್ ಅರು ಸಚಿವರಿಗೆ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಯಿಗೆಗುಡ್ಡೆ -ಚಿತ್ರಾಪು ಪರಿಸರದ ಉಪ್ಪುನೀರಿನ ತಡೆಗೋಡೆ ನಾದುರಸ್ತಿಯಿಂದ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿ ಕೃಷಿ ಹಾನಿ ಸಂಭವಿಸುತ್ತಿದ್ದು ಕೂಡಲೇ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಸಲ್ಲಿಸಿದರು
ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ವಕೀಲ ಚಂದ್ರಶೇಖರ್, ಗೌತಮ್ ಜೈನ್ ಮೂಲ್ಕಿ ಅರಮನೆ, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಸುಗಂಧಿ ದಿನೇಶ್ ಕೊಂಡಾಣ, ಸವಿತಾ ಶರತ್ ಬೆಳ್ಳಾಯರು, ಚಂದ್ರಹಾಸ ಸನಿಲ್ ಮತ್ತಿತರರಿದ್ದರು.ಮೂಲ್ಕಿ ನಗರ ಪಂಚಾಯಿತಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ- ಜನ ಸಾಮಾನ್ಯರಿಗೆ ಸರ್ಕಾರದ ಸವಲತ್ತುಗಳು ನೇರವಾಗಿ ಸಿಗಬೇಕಾಗಿದ್ದು ಮೂಲ್ಕಿ ನಗರ ಪಂಚಾಯಿತಿಯಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಕಚೇರಿ ಮೂಲಕ ಉತ್ತಮ ಸೇವೆ ದೊರೆಯಲೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯ ಸರ್ಕಾರದ ನಗರೋತ್ಥಾನದ 50 ಲಕ್ಷ ರು. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಮೂಲ್ಕಿ ನಗರ ಪಂಚಾಯಿತಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೂಲ್ಕಿ ನಗರ ಪಂಚಾಯಿತಿ ಆಡಳಿತಾಧಿಕಾರಿ ಪ್ರದೀಪ ಕುರ್ಡೆಕರ್, ಮುಖ್ಯಾಧಿಕಾರಿ ಇಂದು ಎಂ., ಎಂಜಿನಿಯರ್ ಆಶ್ವಿನಿ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ, ಸುನೀಲ್ ಆಳ್ವ, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.