ಯುವ ಕ್ರೀಡಾಪಟುಗಳಿಗೆ ಉತ್ತೇಜನ: ಡಾ.ಬಲಜೀತ್‌ಸಿಂಗ್ ಶೇಖಾನ್

KannadaprabhaNewsNetwork | Published : Dec 23, 2023 1:46 AM

ಸಾರಾಂಶ

ವಿಶ್ವಮಟ್ಟದಲ್ಲಿ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳಲು ಪ್ರಾಮುಖ್ಯತೆ ನೀಡಲಾಗುವುದು. ಅಂತರ ವಲಯ ವಿವಿ ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದ ಭಾರತ ವಿಶ್ವವಿದ್ಯಾಲಯ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲಜೀತ್‌ಸಿಂಗ್ ಶೇಖಾನ್.

ಕನ್ನಡಪ್ರಭ ವಾರ್ತೆ ಮಂಡ್ಯಭಾರತ ವಿಶ್ವ ವಿದ್ಯಾನಿಲಯ ತಂಡ ಕ್ರೀಡಾ ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು ವಿಶ್ವಮಟ್ಟದಲ್ಲಿ ಉತ್ತಮಪಡಿಸಿಕೊಳ್ಳುವುದಕ್ಕೆ ಯುವ ಕ್ರೀಡಾಪಟುಗಳಿಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ ಎಂದು ಭಾರತ ವಿಶ್ವವಿದ್ಯಾಲಯ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲಜೀತ್‌ಸಿಂಗ್ ಶೇಖಾನ್ ಹೇಳಿದರು.

ನಗರದ ಪಿಇಎಸ್ ತಾಂತ್ರಿಕ ಕಾಲೇಜಿನ ಹೊರಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಆರಂಭಗೊಂಡ ದಕ್ಷಿಣ ವಲಯ ಅಂತರ ವಿಶ್ವ ವಿದ್ಯಾನಿಲಯದ ಪುರುಷರ ವಾಲಿಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಭಾರತ ವಿಶ್ವವಿದ್ಯಾನಿಲಯ ತಂಡ ವಿಶ್ವಪಟ್ಟಿಯಲ್ಲಿ ೧೬ನೇ ಸ್ಥಾನದಲ್ಲಿದೆ. ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ಅದ್ವಿತೀಯ ಸಾಧನೆಯೊಂದಿಗೆ ಮುನ್ನಡೆಯುತ್ತಿದೆ. ಕ್ರೀಡಾಪಟುಗಳಿಗೆ ಪ್ರೇರಣೆ, ಹೆಚ್ಚಿನ ಪ್ರಾಮುಖ್ಯತೆ ನೀಡುವುದರೊಂದಿಗೆ ವಿಶ್ವಪಟ್ಟಿಯಲ್ಲಿ ಮೇಲ್ಪಂಕ್ತಿಗೇರುವುದಕ್ಕೆ ಎಲ್ಲ ರೀತಿಯ ಉತ್ತೇಜನ ನೀಡುತ್ತಿರುವುದಾಗಿ ತಿಳಿಸಿದರು.

ವಯಸ್ಸಿರುವಾಗ, ಅವಕಾಶಗಳು ದೊರೆತಾಗ ಕ್ರೀಡಾಪಟುಗಳು ಅದನ್ನು ಸಮಯೋಚಿತವಾಗಿ ಬಳಸಿಕೊಂಡು ಸಾಧನೆ ಮಾಡಿಬಿಡಬೇಕು. ಸಮಯ ಬಹಳ ಅಮೂಲ್ಯವಾದುದು. ಅದನ್ನು ವ್ಯರ್ಥ ಮಾಡಿಕೊಂಡರೆ ಮತ್ತೆ ಸಿಗುವುದಿಲ್ಲ. ಇಂದಿನ ಸ್ಟಾರ್ ಕ್ರೀಡಾಪಟು ನಾಳಿನ ಹೀರೋ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಮಂಡ್ಯದ ಇಂತಹ ಒಂದು ಸಂಸ್ಥೆಯಲ್ಲಿ ಇಷ್ಟೊಂದು ಸುಂದರವಾದ, ಸುವ್ಯವಸ್ಥಿತವಾದ ಕ್ಯಾಂಪಸ್ ಇರಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಈ ಮೈದಾನ ದೇಶದವನ್ನು ಪ್ರತಿನಿಧಿಸುವ ಭಾರತದ ತಂಡಕ್ಕೆ ಅತ್ಯುತ್ತುಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಕ್ಷಿಯಾಗಲಿ. ೨೦೦ ವಿಶ್ವವಿದ್ಯಾಲಯಗಳಲ್ಲಿ ಒಂದು ವಿಶ್ವವಿದ್ಯಾಲಯ ಇಂತಹ ಸ್ಪರ್ಧೆ ಏರ್ಪಡಿಸುವುದು, ಆಯ್ಕೆಯಾಗುವುದು ನಿಜಕ್ಕೂ ಅದೃಷ್ಟದ ಸಂಗತಿ ಎಂದು ನುಡಿದರು.

ಮಂಡ್ಯ ಜಿಲ್ಲೆ ದೇಶಕ್ಕೆ ಸಾಕಷ್ಟು ಧೀಮಂತ ರಾಜಕಾರಣಿಗಳನ್ನು ಕೊಟ್ಟಿದೆ. ಅದೇ ರೀತಿ ಸಾಧಕ ಕ್ರೀಡಾಪಟುಗಳನ್ನು ಕ್ರೀಡಾ ಕ್ಷೇತ್ರಕ್ಕೆ ನೀಡಲಿ ಎಂದು ಶುಭ ಹಾರೈಸಿದರು.

ಬೆಳಗಾವಿ ವಿಐಟಿಯು ಉಪ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಓದಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕು. ಇದರಿಂದ ದೈಹಿಕ-ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಸೋಲು-ಗೆಲುವಿನ ಬಗ್ಗೆ ಯಾರೂ ಚಿಂತಿಸಬಾರದು. ಇಂದಿನ ಸೋಲನ್ನು ನಾಳಿನ ಗೆಲುವನ್ನಾಗಿ ಪರಿವರ್ತಿಸಬೇಕು ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

ಕ್ರಿಕೆಟ್ ಒಂದೇ ಕ್ರೀಡೆಯಲ್ಲ. ಯುವ ಕ್ರೀಡಾಪಟುಗಳಿಗೆ ಕ್ರೀಡಾ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಕಠಿಣ ಶ್ರಮದೊಂದಿಗೆ ಮುನ್ನಡೆದಾಗ ಸಾಧನೆ ಮಾಡಬಹುದು. ಉಜ್ವಲ ಭವಿಷ್ಯವನ್ನೂ ಕಂಡುಕೊಳ್ಳಬಹುದು ಎಂದು ನುಡಿದರು.

ಪಿಇಎಸ್ ಸಂಸ್ಥೆ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರು ಬಲೂನ್‌ಗಳು ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜಿಲ್ಲೆಯ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಬಿ.ಎಸ್.ಹರಿಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ವಿವಿಧ ರಾಜ್ಯಗಳ ವಿಶ್ವವಿದ್ಯಾನಿಲಯಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಪಥಸಂಚಲನ ನಡೆಸಿದರು.

ಪಿಇಟಿ ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಬೆಳಗಾವಿ ವಿಟಿಯುನ ಡಾ.ಪುಟ್ಟಸ್ವಾಮಿಗೌಡ, ಪಿಇಎಸ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ.ಎಸಸ್.ವಿನಯ್, ಅನಂತಪದ್ಮನಾಭ ಪ್ರಭು, ಆರ್.ವಿ.ವಿದ್ಯಾ ಇತರರಿದ್ದರು.

Share this article