ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದತಾಲೂಕಿನ ವಿವಿಧ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ದಶಕಗಳ ಹಿಂದೆ ನಿರ್ಮಿಸಿದ ಕೆರೆಗಳು ನಿರ್ವಹಣೆ ಕೊರತೆಯಿಂದ ಅವನತಿಯತ್ತ ಸಾಗುತ್ತಿವೆ.
ಹಿಂದೆ ನಮ್ಮ ಪೂರ್ವಜರು ನಿರ್ಮಿಸಿದ ಕೆರೆಗಳ ನೀರು ಸೇವಿಸಿ ನಾವು ಬದುಕಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಸಾವಿರಾರು ಕೋಟಿ ರುಪಾಯಿ ಖರ್ಚುಮ ಮಾಡಿ, ಕುಡಿಯುವ ನೀರನ್ನು ಪೈಪ್‌ಲೈನ್ ಮೂಲಕ ಜಲಾಶಯ ಮತ್ತು ನದಿಗಳಿಂದ ಪೂರೈಕೆ ಮಾಡಲು ಪ್ರಾರಂಭ ಮಾಡಿದಾಗಿನಿಂದ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಕೆರೆಗಳ ಪುನಶ್ಚೇತನ ಕೈಗೆತ್ತಿಕೊಂಡಿಲ್ಲ. ಸದ್ಯ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಜಾಲಿಕಂಟಿ, ವಿವಿಧ ರೀತಿಯ ಕಸ ಕಡ್ಡಿಗಳು ಬೆಳೆದು ವಿಷ ಜಂತುಗಳ ತಾಣವಾಗಿದೆ. ತಾಲೂಕಿನಲ್ಲಿ 33 ಕೆರೆಗಳಿದ್ದು, ಇದರಲ್ಲಿ ಬಹುತೇಕ ಕೆರೆಗಳ ನೀರು ಕುಡಿಯಲು ಉಪಯೋಗಿಸುತ್ತಿಲ್ಲ. ಹೀಗಾಗಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.ಸಂರಕ್ಷಣೆ ಅಗತ್ಯ: ಸರ್ಕಾರ ರಾಜ್ಯದಲ್ಲಿನ ಕೆರೆಗಳ ಪುನಶ್ಚೇತನಕ್ಕೆ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಆದರೆ ರಾಜ್ಯದ ಗ್ರಾಮೀಣ ಕೆರೆಗಳ ಸಂರಕ್ಷಣೆ ಬಗ್ಗೆ ಕಾಳಜಿ ಕಂಡು ಬರುತ್ತಿಲ್ಲ. ಹೀಗೆ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಹಿಂದಿನ ಕಾಲದಲ್ಲಿ ಈ ರೀತಿ ಕುಡಿಯುವ ನೀರಿನ ಕೆರೆಗಳು ಇದ್ದವು ಎಂದು ತಿಳಿಸುವ ಪರಿಸ್ಥಿತಿ ಬರಬಹುದು. ಹಾಗಾಗಿ ಸರ್ಕಾರ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳು ಕೆರೆಗಳನ್ನು ಸ್ವಚ್ಛಗೊಳಿಸಿ, ಒತ್ತುವರಿಯಿಂದ ವಿಮುಕ್ತಗೊಳಿಸಿ ಅವುಗಳಿಗೆ ನೀರು ತುಂಬಿಸಿ ಪುನಶ್ಚೇತನಕ್ಕೆ ಮುಂದಾಗಬೇಕಾಗಿದೆ.
೧೩ ಗ್ರಾಪಂ ಪಿಡಿಓಗಳ ಸಭೆ ಕರೆದು ಕೆರೆಗಳನ್ನು ಸ್ವಚ್ಛಗೊಳಿಸಲು ಸೂಚಿಸುತ್ತೇನೆ ಎಂದು ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.ಅತೀ ಶೀಘ್ರದಲ್ಲಿ ತಾಪಂ, ಗ್ರಾಪಂ ಅಧಿಕಾರಿಗಳ ಸಭೆ ಕರೆದು ಕೆರೆಗಳ ಸಂರಕ್ಷಣೆಗೆ ನಿರ್ಲಕ್ಷ್ಯತನ ಮಾಡಿದ ಗ್ರಾಪಂ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ. ಎಲ್ಲಾ ಕೆರೆಗಳಿಗೆ ಭೇಟಿ ನೀಡುತ್ತೇನೆ ಎಂದು ತಹಸೀಲ್ದಾರ್
ಶ್ರೀಶೈಲ ತಳವಾರ ಹೇಳಿದರು.ತಾಲೂಕು ಆಡಳಿತ ನಮ್ಮ ಪಟ್ಟಣ ಹಾಗೂ ಗ್ರಾಮೀಣ ಭಾಗದ ಕೆರೆಗಳನ್ನು ಪುನಶ್ಚೇತನ ಮಾಡದಿದ್ದರೆ ತಾಲೂಕು ಬಂದ್‌ಗೆ ಕರೆ ನೀಡಿ ಸರ್ಕಾರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.