ಮನೆಯೇ ಗ್ರಂಥಾಲಯ, ಸಾಹಿತ್ಯ ಭಂಡಾರವೇ ಬದುಕು!

KannadaprabhaNewsNetwork |  
Published : Aug 22, 2026, 01:45 AM IST
ಅಣ್ಣಿಗೇರಿ ಪಟ್ಟಣದ ಪತ್ರೇಶ್ವರ ನವಲಗುಂದ ಅವರು ತಮ್ಮ ಮನೆಯನ್ನೇ ಗ್ರಂಥಾಲಯವನ್ನಾಗಿ ಮಾಡಿಕೊಂಡಿರುವುದು. | Kannada Prabha

ಸಾರಾಂಶ

ಮೊಬೈಲ್‌ ತಂತ್ರಜ್ಞಾನದಿಂದ ಹಲವು ಅನುಕೂಲಗಳಿದ್ದರೂ ಅದರ ಅತಿಯಾದ ಬಳಕೆ ವಿದ್ಯಾರ್ಥಿಗಳ ಓದುವ ಹವ್ಯಾಸಕ್ಕೆ ಧಕ್ಕೆಯಾಗುತ್ತಿದೆ.

ರಫೀಕ್‌ ಕಲೇಗಾರ

ಅಣ್ಣಿಗೇರಿ:

ಮೊಬೈಲ್‌ ಜಗತ್ತೇ ತಮ್ಮ ಪ್ರಪಂಚ ಎಂಬಂತೆ ಬದುಕುತ್ತಿರುವ ಜನರ ಮಧ್ಯೆ ಪುಸ್ತಕವನ್ನೇ ಬದುಕಿನ ಆಸ್ತಿಯನ್ನಾಗಿ ಮಾಡಿಕೊಂಡು ಸಾಹಿತ್ಯದ ಭಂಡಾರ ಕಟ್ಟಿಕೊಂಡಿರುವ 82 ವರ್ಷದ ಪತ್ರೇಶ್ವರ ನವಲಗುಂದ ಇತರರಿಗೆ ಮಾದರಿಯಾಗಿದ್ದಾರೆ.

ಪಟ್ಟಣದ ಪತ್ರೇಶ್ವರ ತಮ್ಮ ಮನೆಯನ್ನೇ ಗ್ರಂಥಾಲಯವನ್ನಾಗಿ ರೂಪಿಸಿಕೊಂಡಿದ್ದು, 6 ಸಾವಿರಕ್ಕೂ ಅಧಿಕ ಪುಸ್ತಕ ಸಂಗ್ರಹಿಸಿ ಜತನ ಮಾಡುತ್ತಿದ್ದಾರೆ.

ಮೊಬೈಲ್‌ ತಂತ್ರಜ್ಞಾನದಿಂದ ಹಲವು ಅನುಕೂಲಗಳಿದ್ದರೂ ಅದರ ಅತಿಯಾದ ಬಳಕೆ ವಿದ್ಯಾರ್ಥಿಗಳ ಓದುವ ಹವ್ಯಾಸಕ್ಕೆ ಧಕ್ಕೆಯಾಗುತ್ತಿದೆ. ರೀಲ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಿರುವ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಪತ್ರೇಶ್ವರ ಅವರು ಸಾರುತ್ತಿದ್ದಾರೆ.

₹4 ಲಕ್ಷ ಖರ್ಚು:

ಪುಸ್ತಕವೇ ಪ್ರಪಂಚ, ಪುಸ್ತಕವೇ ಆಸ್ತಿ ಎಂಬ ಭಾವನೆಯೊಂದಿಗೆ ಪತ್ರೇಶ್ವರ ಅವರು ಸ್ವಂತ ಹಣದಲ್ಲಿ ₹4 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ವಿವಿಧ ಸಾಹಿತ್ಯ ಕೃತಿಗಳನ್ನು ಖರೀದಿಸಿದ್ದಾರೆ. ಪ್ರತಿಯೊಂದು ಪುಸ್ತಕಕ್ಕೂ ಖಾಕಿ ಕವರ್ ಹಾಕಿ ಸಂರಕ್ಷಿಸಿದ್ದು, ಪುಸ್ತಕದ ಹೆಸರು, ಲೇಖಕರ ಹೆಸರು ಹಾಗೂ ಕ್ರಮ ಸಂಖ್ಯೆಯನ್ನು ನೋಟ್‌ಬುಕ್‌ನಲ್ಲಿ ದಾಖಲಿಸಿದ್ದಾರೆ. ಮನೆಯ 4 ವಿಭಾಗಗಳಲ್ಲಿ ಪುಸ್ತಕಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಜೋಡಿಸಿಟ್ಟಿದ್ದಾರೆ. ಕನ್ನಡಪ್ರಭ ಸೇರಿದಂತೆ ವಿವಿಧ ದಿನಪತ್ರಿಕೆ ಹಾಗೂ ನಿಯತಕಾಲಿಕೆ ತರಿಸಿ ಓದುವುದು ಇವರ ನಿತ್ಯದ ಹವ್ಯಾಸವಾಗಿದೆ.

ಗಣ್ಯರಿಂದ ಮೆಚ್ಚುಗೆ:

ಪತ್ರೇಶ್ವರ ಅವರ ಮನೆ ಗ್ರಂಥಾಲಯವನ್ನು ಕೊಪ್ಪಳದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ್ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಸದಸ್ಯ ಎನ್.ಎಂ. ಯಲಬುರ್ಗಿ ಸೇರಿದಂತೆ ಹಲವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಕ್ತ ಆಹ್ವಾನ:

ಆಸ್ತಿ, ಹಣ ಸಂಪಾದಿಸಿ ಕೂಡಿಡುವುದು ಸಾಮಾನ್ಯ. ಆದರೆ, ಪುಸ್ತಕವನ್ನೇ ಜೀವನ, ಜಗತ್ತು ಎಂದು ಭಾವಿಸುವುದು ಅಪರೂಪ ಎನ್ನುವ ಪತ್ರೇಶ್ವರ, ಪುಸ್ತಕ ಓದುವುದರಿಂದ ಜ್ಞಾನ, ಸೂಕ್ಷ್ಮ ತಿಳಿವಳಿಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎನ್ನುತ್ತಾರೆ. ರಜೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆ ಗ್ರಂಥಾಲಯಕ್ಕೆ ಬಂದು ಪುಸ್ತಕ ಓದಬಹುದು ಎಂದು ‘ಕನ್ನಡಪ್ರಭ’ ಮೂಲಕ ಆಹ್ವಾನ ನೀಡಿದ್ದಾರೆ.

ಮೊಬೈಲ್‌ ಬಳಕೆಯ ಜತೆಗೆ ಪುಸ್ತಕಕ್ಕೂ ಮಹತ್ವ ನೀಡಬೇಕು. ಪ್ರತಿದಿನ ಸ್ವಲ್ಪ ಸಮಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡರೆ ಜ್ಞಾನ, ವಿವೇಕ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂಬುದು ಪತ್ರೇಶ್ವರ ನವಲಗುಂದ ಅವರ ಆಶಯ.ವ್ಯಕ್ತಿತ್ವ ನಿರ್ಮಾಣಕ್ಕೆ ಪುಸ್ತಕ ಓದು ಮುಖ್ಯ. ಪತ್ರೇಶ್ವರ ಅವರ ಗ್ರಂಥಾಲಯದಲ್ಲಿ ಗಿರೀಶ ಕಾರ್ನಾಡ್ ಅವರ ‘ತಲೆದಂಡ’, ಎಸ್.ಎಲ್. ಭೈರಪ್ಪ ಅವರ ಕೃತಿಗಳು, ‘ಶೂನ್ಯ ಸಂಪಾದನೆ’ ಹಾಗೂ ವಚನ ಸಂಪುಟ ಸೇರಿದಂತೆ ಹಲವು ಕೃತಿಗಳನ್ನು ಓದಿದ್ದೇನೆ. ಪುಸ್ತಕ ಓದುವುದರಿಂದ ಜ್ಞಾನಾರ್ಜನೆ ಮಾತ್ರವಲ್ಲ, ಸೂಕ್ಷ್ಮವಾಗಿ ಯೋಚಿಸುವ ಹಾಗೂ ಧೈರ್ಯದಿಂದ ಮಾತನಾಡುವ ಸಾಮರ್ಥ್ಯವೂ ಬೆಳೆಯುತ್ತದೆ.

ಪ್ರೊ. ಎಸ್.ಎಸ್. ಹರ್ಲಾಪುರ, ಪುಸ್ತಕ ಪ್ರೇಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗದಲ್ಲಿ ಅಕ್ರಮವಾಗಿ ವಾಸವಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ವಶ
ಕೂಲಿ ಹಣಕ್ಕಾಗಿ ಗ್ರಾಪಂ ಎದುರು ಕಾರ್ಮಿಕರ ಪ್ರತಿಭಟನೆ