ಕೊಡಗು ಜಿಲ್ಲೆಯಲ್ಲಿ ಮನೆ ಬಳಿಗೆ ಆರೋಗ್ಯ ಸೇವೆ

KannadaprabhaNewsNetwork |  
Published : Jul 19, 2025, 01:00 AM IST
ಚಿತ್ರ :  18ಎಂಡಿಕೆ2 : ಗೃಹ ಆರೋಗ್ಯ’ ಯೋಜನೆಗೆ ಶಾಸಕರಾದ ಡಾ.ಮಂತರ್ ಗೌಡ ಚಾಲನೆ ನೀಡಿದರು.  | Kannada Prabha

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಇವರ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಗೃಹ ಆರೋಗ್ಯ’ ಕಾರ್ಯಕ್ರಮಕ್ಕೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು.

‘ಗೃಹ ಆರೋಗ್ಯ’ ಯೋಜನೆಗೆ ಶಾಸಕ ಡಾ.ಮಂತರ್ ಗೌಡ ಚಾಲನೆಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವೈದ್ಯಕೀಯ ತರಬೇತಿ ಕೇಂದ್ರ’ ಆರಂಭಿಸಲು ಚಿಂತಿಸಲಾಗಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಇವರ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಗೃಹ ಆರೋಗ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೊಡಗು ಜಿಲ್ಲೆಗೆ ಸರ್ಕಾರ ಕಳೆದ ಎರಡು ವರ್ಷದಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ 41 ಕೋಟಿ ರು. ಬಿಡುಗಡೆ ಮಾಡಿದೆ. ಹಾಗೆಯೇ ವಿರಾಜಪೇಟೆ ತಾಲೂಕು ಆಸ್ಪತ್ರೆಯನ್ನು 400 ಹಾಸಿಗೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಹಾಗೆಯೇ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಟಿ ಸ್ಕ್ಯಾನ್ ಜೊತೆಗೆ ಎಂಆರ್‌ಐ ಸ್ಕ್ಯಾನ್ ಸಹ 10 ಕೋಟಿ ರು. ವೆಚ್ಚದಲ್ಲಿ ಆರಂಭವಾಗಿದೆ. ಹಾಗೆಯೇ ಎಚ್‌ಐವಿ, ಎಚ್‌ಬಿಪಿ ಮತ್ತಿತರ ಆರೋಗ್ಯ ಸೇವೆಗಳು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಯೇ ದೊರೆಯಲಿದೆ ಎಂದು ಡಾ.ಮಂತರ್ ಗೌಡ ವಿವರಿಸಿದರು.ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುತ್ತಿದ್ದರು. ಈಗ ಸರ್ಕಾರ ಆದಷ್ಟು ಹೆಚ್ಚಿನ ಆರೋಗ್ಯ ಸೇವೆ ಕಲ್ಪಿಸಿದ್ದು, ಮಡಿಕೇರಿಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಗೃಹ ಆರೋಗ್ಯವು ನಮ್ಮ ಮನೆಯಿಂದಲೇ ಆರಂಭವಾಗಬೇಕು. ಹಾಗಾದಾಗ ಮಾತ್ರ ಇದಕ್ಕೆ ಅರ್ಥ ಬರಲಿದೆ. ನಮ್ಮ ನಮ್ಮ ಕುಟುಂಬದಿಂದಲೇ ಗೃಹ ಆರೋಗ್ಯವನ್ನು ಅನುಸರಿಸುವಂತಾಗಬೇಕು. ಇದರಿಂದ ಇತರರಿಗೆ ಮಾಹಿತಿ ನೀಡಬಹುದಾಗಿದೆ. ಪ್ರತಿಯೊಬ್ಬರೂ ಪ್ರತೀದಿನ ವ್ಯಾಯಾಮ ಮತ್ತು ನಡಿಗೆ ಮಾಡುವಂತಾಗಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ರಕ್ತದೊತ್ತಡ, ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಹೇಳಿದರು.

30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಡಯಾಬೆಟಿಕ್, ಫುಡ್ ಮತ್ತು ರೆಟಿನೋಪತಿ, ಮಾನಸಿಕ ಆರೋಗ್ಯ, ಅಸ್ವಸ್ಥತೆ, ನರ ವೈಜ್ಞಾನಿಕ ಅಸ್ವಸ್ಥತತೆ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ಶ್ವಾಸಕೋಶ ಕಾಯಿಲೆ, ಆಲ್ಕೋಹಾಲ್ ರಹಿತ ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ, ರಕ್ತ ಹೀನತೆ (19 ರಿಂದ 29 ವರ್ಷ ವಯಸ್ಸಿನವರಿಗೆ) ಆರೋಗ್ಯ ತಪಾಸಣೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಉಚಿತವಾಗಿ ತಪಾಸಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ:

ಅಸಾಂಕ್ರಾಮಿಕ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವಂತಾಗಬೇಕು. ಜೊತೆಗೆ ಜಾಗೃತಿ ಮೂಡಿಸಬೇಕು. ಸಕಾಲದಲ್ಲಿ ಆರೋಗ್ಯ ತಪಾಸಣೆ ಮತ್ತು ನಿರ್ವಹಣೆಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು, ವಿಕೇಂದ್ರಿಕೃತ ಆರೋಗ್ಯ ಸೇವೆಗಳ ಮೂಲಕ ನಿರಂತರವಾಗಿ ಆರೈಕೆ ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಡಾ.ಮಂತರ್ ಗೌಡ ತಿಳಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವತ್ರಿಕ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಗೃಹ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು. ಆಶಾ ಕಾರ್ಯಕರ್ತರಲ್ಲಿ ಹೆಚ್ಚಿನ ಜವಾಬ್ದಾರಿಯಿದ್ದು, ತಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯ ಕಾಪಾಡುವುದು ಅತೀ ಮುಖ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಆರೋಗ್ಯ ಸೇವೆಗಳು ಲಭ್ಯವಿದೆ ಎಂದು ಶಾಸಕರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಮನೆ ಮನೆಗೆ ಆರೋಗ್ಯ ಸೇವೆಗಳು ಕಾರ್ಯಕ್ರಮದ ಘೋಷಣೆಯಡಿ ಅಸಾಂಕ್ರಾಮಿಕ ರೋಗಗಳ ಆರೋಗ್ಯ ತಪಾಸಣೆ ಮತ್ತು ನಿರ್ವಹಣೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ನೀಡುವುದಾಗಿದೆ ಎಂದರು. ಪ್ರತೀ ದಿನ 3 ಲೀ. ನೀರು ಕುಡಿಯುವುದು, ಆರೋಗ್ಯಕರ ತೂಕವನ್ನು ನಿರ್ವಹಿಸುವುದು, 30 ನಿಮಿಷ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವಿಸಿ, ಹೆಚ್ಚು ಹಣ್ಣು ಮತ್ತು ತರಕಾರಿಯನ್ನು ಸೇವಿಸುವುದು, ನಿಯಮಿತವಾಗಿ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಮಾಡಿಸುವುದು, ನಿಗದಿತ ಸಮಯಕ್ಕೆ ಔಷಧಿ ಸೇವಿಸುವುದು, ಪ್ರತೀ ದಿನ 5 ಗ್ರಾಂಕ್ಕಿಂತ ಕಡಿಮೆ ಉಪ್ಪು ಸೇವಿಸಬೇಕು ಎಂದು ಮಾಹಿತಿ ನೀಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟು 2.52 ಲಕ್ಷ ಜನರಿದ್ದು, 53 ಸಾವಿರ ಜನರಿಗೆ ಅಧಿಕ ರಕ್ತದೊತ್ತಡ, 33 ಸಾವಿರ ಜನರಿಗೆ ಮಧುಮೇಹ, 29 ಜನರಿಗೆ ಬಾಯಿ ಕ್ಯಾನ್ಸರ್, 47 ಮಹಿಳೆಯರಿಗೆ ಸ್ತನ ಕ್ಯಾನ್ಸರ್, 20 ಮಂದಿಗೆ ಗರ್ಭಕೋಶ ಇದೆ ಎಂದು ಮಾಹಿತಿ ನೀಡಿದರು.ಲಕ್ಷಕ್ಕೂ ಹೆಚ್ಚು ಮನೆಗೆ ಭೇಟಿ:

ಗೃಹ ಆರೋಗ್ಯದಡಿ ಕೊಡಗು ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ನೀಡಲು 157 ತಂಡವನ್ನು ರಚಿಸಲಾಗಿದೆ. ಅದರಲ್ಲಿ ಈ ತಂಡವು 1,00,000ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಡಾ.ಶ್ರೀನಿವಾಸ್ ಮಾಹಿತಿ ನೀಡಿದರು. ಆಲೂರು ಸಿದ್ದಾಪುರ ಹಾಗೂ ಶನಿವಾರ ಸಂತೆ ವೈದ್ಯಾಧಿಕಾರಿಗಳಾದ ಡಾ.ಸುಪರ್ಣ ಮತ್ತು ಡಾ.ಅಶೋಕ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇದೇ ಸಂದರ್ಭದಲ್ಲಿ ಶಾಸಕ ಡಾ.ಮಂತರ್ ಗೌಡ, ಸರ್ಕಾರ ಹೊರ ತಂದಿರುವ ಗೃಹ ಆರೋಗ್ಯ ಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಜಿ.ಪಂ. ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಡಾ.ಸನತ್, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ಶಾಂಭವಿ, ತಾಲೂಕು ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶ್ರುಶ್ರೂಷಕರು, ಆಶಾ ಕಾರ್ಯಕರ್ತರು, ಇತರರು ಇದ್ದರು. ಅಶ್ವಿನಿ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?