ರೇಣುಕಾಸ್ವಾಮಿ ಹತ್ಯೆ ಪ್ರಕರಣ - ಜೈಲಲ್ಲಿರುವ ನಟ ದರ್ಶನ್‌ಗೆ ಮನೆ ಊಟ: ನಾಡಿದ್ದು ಕೋರ್ಟ್‌ ತೀರ್ಪು

KannadaprabhaNewsNetwork | Updated : Jul 23 2024, 10:08 AM IST

ಸಾರಾಂಶ

ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌, ಮನೆಯಿಂದ ಊಟ, ಬಟ್ಟೆ, ಹಾಸಿಗೆ ಮತ್ತು ಪುಸ್ತಕ ತರಿಸಿಕೊಳ್ಳಲು ಅನುಮತಿ ನೀಡಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು 24ನೇ ಎಸಿಎಂಎಂ ನ್ಯಾಯಾಲಯ ಜು.25ರಂದು ಪ್ರಕಟಿಸಲಿದೆ.

 ಬೆಂಗಳೂರು :  ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌, ಮನೆಯಿಂದ ಊಟ, ಬಟ್ಟೆ, ಹಾಸಿಗೆ ಮತ್ತು ಪುಸ್ತಕ ತರಿಸಿಕೊಳ್ಳಲು ಅನುಮತಿ ನೀಡಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು 24ನೇ ಎಸಿಎಂಎಂ ನ್ಯಾಯಾಲಯ ಜು.25ರಂದು ಪ್ರಕಟಿಸಲಿದೆ.

ಈ ಕುರಿತಂತೆ ದರ್ಶನ್‌ ಸಲ್ಲಿಸಿರುವ ಅರ್ಜಿ ಕುರಿತಂತೆ ಸೋಮವಾರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಅವರ ಪೀಠ ಜು.25ರಂದು ಆದೇಶ ಪ್ರಕಟಿಸುವುದಾಗಿ ತಿಳಿತು.

ಇದಕ್ಕೂ ಮುನ್ನ ದರ್ಶನ್‌ ಪರ ವಕೀಲರು ವಾದಿಸಿ, ವಿಚಾರಣಾಧೀನ ಕೈದಿ ಜೈಲು ಅಧಿಕಾರಿ ಅನುಮತಿ ಮೇಲೆ ತನ್ನ ಖರ್ಚಿನಿಂದ ಮನೆಯಿಂದ ಊಟ, ಸ್ವಂತ ಹಾಸಿಗೆ, ಬಟ್ಟೆ ಮತ್ತು ದಿನ ಪತ್ರಿಕೆಗಳನ್ನು ಪಡೆಯಲು ಜೈಲು ನಿಯಮಗಳ ಪ್ರಕಾರ ಅವಕಾಶವಿದೆ. ಕೈದಿಗೆ ಹೊರಗಡೆಯಿಂದ ಊಟ ತರಿಸಿಕೊಳ್ಳಲು ಕೈಗಲಾದ ಪರಿಸ್ಥಿತಿಯಲ್ಲಿ ಆತನಿಗೆ ಜೈಲಿನ ಆಹಾರ ನೀಡಬಹುದು. ಕೊಲೆ ಆರೋಪ ಹೊತ್ತಿರುವ ಮಾತ್ರಕ್ಕೆ ವಿಚಾರಣಾಧೀನ ಕೈದಿಯ ಮೂಲಭೂತ ಹಕ್ಕು ಕಸಿಯಬಾರದು. ಹಾಗಾಗಿ, ದರ್ಶನ್‌ ಅವರ ಮನವಿ ಪುರಸ್ಕರಿಸಬೇಕು’ ಎಂದು ಕೋರಿದರು.

ಈ ಮನವಿ ಆಕ್ಷೇಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌, ‘ಅರ್ಜಿದಾರರಿಗೆ ಅತಿಸಾರ ಭೇದಿಯಾಗುತ್ತಿದೆ. ಜೈಲು ಆಹಾರ ಜೀರ್ಣವಾಗುತ್ತಿಲ್ಲ. ಜ್ವರ ಇದ್ದು, ದೇಹದ ತೂಕ ಇಳಿದಿದೆ ಎನ್ನುತ್ತಿದ್ದಾರೆ. ಆದರೆ, ಅವರಿಗೆ ಹಿಪ್ ಜಾಯಿಂಟ್ ಸಮಸ್ಯೆ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ. ಜೊತೆಗೆ, ಜೈಲಿಗೆ ಹೋದ ನಂತರ ತುಂಬಾ ದಿನಗಳು ಕಾಲ ದರ್ಶನ್‌ಗೆ ಯಾವುದೇ ತೊಂದರೆ ಇರಲಿಲ್ಲ’ ಎಂದು ತಿಳಿಸಿದರು.

ಅಲ್ಲದೆ, ಜೈಲು ಆಹಾರದಿಂದ ಯಾವುದೇ ತೊಂದರೆ ಇಲ್ಲ. ಜ್ವರ ಇದ್ದರೆ ಜೈಲಿನ ವೈದ್ಯಾಧಿಕಾರಿಯ ಸಲಹೆ ಮೇರೆಗೆ ಪಡೆಯಬಹುದು. ಜೈಲು ವೈದ್ಯಕೀಯ ವರದಿಯಲ್ಲಿ ಬೆಡ್ ರೆಸ್ಟ್ ಹೇಳಿದ್ದಾರೆ. ಅದರ ಪ್ರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವಿಶ್ರಾಂತಿ ತೆಗೆದುಕೊಳ್ಳಬಹುದು. ಆಸ್ಪತ್ರೆಯ ಆಹಾರ ಹಾಗೂ ಮೊಟ್ಟೆ ಪಡೆಯಬಹುದು. ಆದರೆ, ದಿನಾ ಬಿರಿಯಾನಿ ತಿನ್ನಲು ಅವಕಾಶವಿಲ್ಲ. ಹೊರಗಿನ ಆಹಾರ ಹಾಗೂ ಬೆಡ್ ಅನುಮತಿ ನೀಡಲು ಕೇಳಿದ್ದು, ಅದಕ್ಕೆ ಕಾನೂನಿನಲ್ಲಿ ಅವಕಾಶಗಳಿಲ್ಲ ಎಂದು ವಾದಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್‌, ಜೂ.22ರಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಜೈಲು ಆಹಾರ ಜೀರ್ಣವಾಗುತ್ತಿಲ್ಲ. ಜೈಲು ಆಹಾರ ಸೇವಿಸಿದ್ದರಿಂದ ಅತಿಸಾರ ಭೇದಿ ಉಂಟಾಗಿದೆ. ಹೀಗಾಗಿ, ಮನೆಯಿಂದ ಊಟ ಮತ್ತು ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

Share this article