ಕನ್ನಡಪ್ರಭ ವಾರ್ತೆ ತುಮಕೂರು ರಾಜ್ಯದ ಗೃಹ ಸಚಿವ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಡಾ. ಜಿ. ಪರಮೇಶ್ವರ್ ಅವರ 73ನೇ ಹುಟ್ಟುಹಬ್ಬವನ್ನು ನಗರದ ಹೆಗ್ಗೆರೆ ಸಮೀಪದ ಗೊಲ್ಲಹಳ್ಳಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಗೊಲ್ಲಹಳ್ಳಿಯ ನಿವಾಸದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು. ಡಾ. ಜಿ ಪರಮೇಶ್ವರ್‌ರವರ ನಿವಾಸಕ್ಕೆ ಬೌದ್ಧ ಧರ್ಮದ ಗುರುಗಳು ಭೇಟಿ ನೀಡಿ ಪರಮೇಶ್ವರ್‌ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಆಶೀರ್ವದಿಸಿದರು.
ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪರಮೇಶ್ವರ್ ರವರ ನಿವಾಸಕ್ಕೆ ತೆರಳಿ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು.ತುಮಕೂರು ಹಾಲು ಒಕ್ಕೂಟದ ವತಿಯಿಂದ ಆಡಳಿತಾಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಸಿಬ್ಬಂದಿ ವರ್ಗದವರು ಸಹ ಸಚಿವರಿಗೆ ಜನ್ಮದಿನದ ಶುಭ ಕೋರಿದರು. ಗೊಲ್ಲಹಳ್ಳಿಯ ಪರಮೇಶ್ವರ್ ನಿವಾಸದಲ್ಲಿ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ನೆಚ್ಚಿನ ನಾಯಕನಿಗೆ ಬೃಹತ್ ಪುಷ್ಪಹಾರಗಳನ್ನು ಹಾಕುವ ಮೂಲಕ ಜನ್ಮದಿನದ ಶುಭ ಕೋರಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.ರಾತ್ರಿಯಿಂದಲೇ ಪರಮೇಶ್ವರ್ ನಿವಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದು, ಹುಟ್ಟುಹಬ್ಬದ ಶುಭಾಶಯ ಕೋರಲು ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪರಮೇಶ್ವರ್ ಅವರ ನಿವಾಸದ ಆವರಣದಲ್ಲಿ ನೆರೆದಿದ್ದ ಕೈ ಕಾರ್ಯಕರ್ತರು, ಅಭಿಮಾನಿಗಳು ಪರಮೇಶ್ವರ್ ರವರ ಜೈಕಾರದ ಘೋಷಣೆಗಳು ಕೂಗುತ್ತಾ ಹರ್ಷ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.ಫೋಟೋ: 73ನೇ ಜನ್ಮದಿನ ಆಚರಿಸಿಕೊಂಡ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಭ ಕೋರಿದರು.