ಕಾರವಾರ: ಮೊದಲಿನಿಂದಲೂ ಕಾಂಗ್ರೆಸ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಹೊರ ರಾಜ್ಯದ, ಜಿಲ್ಲೆಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತಿದೆ ಎಂದು ಬಿಜೆಪಿ ಮಾಜಿ ವಕ್ತಾರ ನಾಗರಾಜ ನಾಯಕ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೯೫೨ರಿಂದ ಇಂದಿನವರೆಗೆ ೧೮ ಚುನಾವಣೆ ಆಗಿದೆ. ಕಾಂಗ್ರೆಸ್ ೮ಕ್ಕಿಂತ ಹೆಚ್ಚು ಬಾರಿ ರಾಜ್ಯದ, ಜಿಲ್ಲೆಯ ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿದೆ. ಬಿಜೆಪಿ ಮಾತ್ರ ಸ್ಥಳೀಯರಿಗೆ ಆದ್ಯತೆ ನೀಡುತ್ತಿದೆ. ೧೯೫೭- ೬೨ರ ವರೆಗೆ ಉಡುಪಿಯ ಜೋಕಿಮ್ ಆಳ್ವ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿತ್ತು. ಅವರು ಸ್ವಾತಂತ್ರ‍್ಯ ಹೋರಾಟಗಾರ ಎಂದು ಹೇಳಿತ್ತು. ಹೋರಾಟ ನಡೆಸಿದವರು ಸ್ಥಳೀಯ ಕಾಂಗ್ರೆಸ್‌ನಲ್ಲಿದ್ದರೂ ಉಡುಪಿಯಿಂದ ಆಮದು ಮಾಡಿಕೊಳ್ಳಲಾಗಿತ್ತು. ಸಂಸದರಾಗಿ ಅವರು ಉತ್ತರ ಕನ್ನಡಕ್ಕೆ ಬಂದಿದ್ದು ಬೆರಳೆಣಿಕೆಯ ದಿನಗಳಷ್ಟು ಎಂದು ಹಿರಿಯರು ಹೇಳುತ್ತಾರೆ. ಜೋಕಿಮ್ ಅವರ ನಿರ್ಲಕ್ಷ್ಯದಿಂದ ೧೯೬೨ರಲ್ಲಿ ಮಂಗಳೂರಿನಲ್ಲಿ ಬಂದರು ಉದ್ಘಾಟನೆ ಆಯಿತು. ಅದೇ ಉತ್ತರ ಕನ್ನಡದಲ್ಲಿ ಆಗಿದ್ದರೆ ಇಂದು ಸಾಕಷ್ಟು ಅಭಿವೃದ್ಧಿ ಆಗುತ್ತಿತ್ತು ಎಂದರು.೧೯೯೮ರಿಂದ ೪ ಬಾರಿ ಮಾರ್ಗರೇಟ್ ಆಳ್ವ ಅವರಿಗೆ ಅವಕಾಶ ನೀಡಲಾಗಿತ್ತು. ಬುದ್ಧಿವಂತ ಮಹಿಳೆಯರು, ಹೋರಾಟಗಾರರು ಇದ್ದರೂ ಅವಕಾಶ ವಂಚಿತರಾಗಿದ್ದರು. ೨೦೨೪ರಲ್ಲಿ ಡಾ. ಅಂಜಲಿ ನಿಂಬಾಳಕರ ಅವರನ್ನು ಕಣಕ್ಕೆ ಇಳಿಸಲಾಗಿದೆ. ಹೊರ ರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅವರ ಪತಿ ಐಪಿಎಸ್ ಅಧಿಕಾರಿಯಾದ ಕಾರಣ ಬಂದಿದ್ದಾರೆ. ಅಂಜಲಿ ಮೂಲತಃ ಮಹಾರಾಷ್ಟ್ರದವರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇದಕ್ಕೆ ಕಾರಣ ಮಹಾರಾಷ್ಟ್ರದಲ್ಲೇ ಕಳೆಯುತ್ತಾರೆ. ಸ್ಥಳೀಯ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಮತದಾರರು ಈ ನಿರ್ಧಾರ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್‌ನಲ್ಲಿ ಒಳ್ಳೆಯ ಜನರು ಇದ್ದಾರೆ. ಆರ್.ವಿ. ದೇಶಪಾಂಡೆ, ಆರ್.ಎನ್. ನಾಯ್ಕ, ರಮಾನಂದ ನಾಯಕ ಇನ್ನೂ ಅನೇಕರು ಮುತ್ಸದ್ದಿ ವ್ಯಕ್ತಿಗಳು ಇದ್ದರು. ಆದರೆ ಅವರನ್ನೆಲ್ಲ ನಿರ್ಲಕ್ಷ್ಯ ಮಾಡಿದೆ. ಖಾನಾಪುರ ಮತದಾರರಿಗೆ ಆದ ಅನುಭವ ನಮಗೆ ಆಗಬಾರದು ಎಂದರೆ ಬಿಜೆಪಿ ಬೆಂಬಲಿಸಬೇಕು ಎಂದರು.ಸುಭಾಸ ಗುನಗಿ, ಸಂಜಯ ಸಾಳುಂಕೆ, ನಾಗೇಶ ಕುರ್ಡೆಕರ, ಮನೋಜ ಭಟ್, ನಯನಾ ನೀಲಾವರ, ರಾಜು ಭಂಡಾರಿ ಇದ್ದರು.