ಗೃಹ ಬಳಕೆ ಸಿಲಿಂಡರ್ ಪೂರೈಕೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅಭಾವ ಸೃಷ್ಟಿಯಾಗಿ ಗೃಹ ಬಳಕೆದಾರರು ಅಡುಗೆ ಅನಿಲದ ಸಿಲಿಂಡರ್‌ಗಳಿಗೆ ಮುಗಿ ಬೀಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗೃಹ ಬಳಕೆ ಸಿಲಿಂಡರ್ ಪೂರೈಕೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ ತಾಲೂಕು ವ್ಯಾಪ್ತಿಯಲ್ಲಿ ಅಭಾವ ಸೃಷ್ಟಿಯಾಗಿ ಗೃಹ ಬಳಕೆದಾರರು ಅಡುಗೆ ಅನಿಲದ ಸಿಲಿಂಡರ್ ಗಳಿಗೆ ಮುಗಿ ಬೀಳುತ್ತಿದ್ದಾರೆ.
ಅಡುಗೆ ಅನಿಲ ಬಳಕೆದಾರರು ನಿಯಮಾನುಸಾರ ತಮ್ಮ ಭಾಗದ ಸಿಲಿಂಡರ್ ಗೆ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಬೇಕು. ಆದರೆ, ಆನ್ ಬುಕ್ಕಿಂಗ್ ಆಗುತ್ತಿಲ್ಲ. ಬುಕ್ಕಿಂಗ್ ಆಗದೆ ಸಿಲಿಂಡರ್ ದೊರೆಯದ ಕಾರಣ ಗೃಹಣಿಯರು ಆತಂಕಕ್ಕೆ ಸಿಲುಕಿದ್ದಾರೆ. ನಿಯಮಾನುಸಾರ 25ದಿನ ಕಳೆದ ಅನಂತರವೂ ಆನ್ ಲೈನ್ ಬುಕ್ಕಿಂಗ್ ಆಗುತ್ತಿಲ್ಲ. ಅಡಿಗೆ ಅನಿಲ ಬುಕ್ಕಿಂಗ್‌ಗಾಗಿ ನಿರಂತರ ಪ್ರಯತ್ನಿಸಿದರೆ ಒಂದು ದಿನಕ್ಕೂ ಎರಡು ದಿನಕ್ಕೂ ಬುಕ್ಕಿಂಗ್ ಸಂಪರ್ಕ ಆಗುತ್ತಿದೆ. ಇದರಿಂದ ಒಂದೇ ಸಿಲಿಂಡರ್ ಸಂಪರ್ಕ ಹೊಂದಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಹೋಂ ಡಿಲೆವರಿ ಬಂದ್:
ಪಟ್ಟಣದಲ್ಲಿ ಇಂಡೇನ್, ಎಚ್.ಪಿ, ಭಾರತ್ ಗ್ಯಾಸ್ ಸೇರಿದಂತೆ ವಿವಿಧ ಅನಿಲ ಕಂಪನಿಗಳ ಗ್ರಾಹಕರು ಅವರ ಅದೃಷ್ಟದಿಂದ ಆನ್ ಲೈನ್ ಬುಕ್ಕಿಂಗ್ ಆದರೆ, ಗ್ಯಾಸ್ ಏಜೆನ್ಸಿ ಅಂಗಡಿಗಳ ಮುಂದೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕು. ಗ್ಯಾಸ್ ಏಜೆನ್ಸಿಯವರು ಇದುವರೆಗೆ ನೀಡುತ್ತಿದ್ದ ಹೋಂ ಡಿಲೆವರಿ ರದ್ದುಪಡಿಸಿದ್ದಾರೆ.
ಗ್ಯಾಸ್ ಏಜೆನ್ಸಿ ಮಾಲೀಕರು ಗ್ರಾಹಕರ ಕರೆಗಳನ್ನು ಸ್ವೀಕರಿಸಿ ಸಮರ್ಪಕ ಉತ್ತರ ನೀಡುತ್ತಿಲ್ಲ. ವಾಣಿಜ್ಯ ಬಳಕೆ ಸಿಲಿಂಡರುಗಳಿಗೆ ಮಾತ್ರ ಅಭಾವವಿದೆ ಎಂದು ನೆಮ್ಮದಿಯಾಗಿದ್ದ ಗೃಹಣಿಯರಿಗೆ ಇದೀಗ ಅಡುಗೆ ಅನಿಲದ ಅಭಾವದ ಬಿಸಿ ತಟ್ಟಲಾರಂಭಿಸಿದೆ. ಪಟ್ಟಣದಲ್ಲಿ ನಿರ್ಮಿಸಿರುವ ಶೇ.80ರಷ್ಟು ಮನೆಗಳಲ್ಲಿ ಸೌದೆ ಒಲೆಗಳೇ ಇಲ್ಲ. ಹೊಸದಾಗಿ ಸೌದೆ ಒಲೆ ನಿರ್ಮಿಸಿಕೊಳ್ಳಲು ಬಹುತೇಕ ಮನೆಗಳಲ್ಲಿ ಜಾಗದ ಕೊರತೆಯಿದೆ. ಸಕಾಲಕ್ಕೆ ಸಿಲಿಂಡರ್ ದೊರೆಯದೆ ಇರುವುದು ಗೃಹಣಿಯರು ಮತ್ತು ಅವರ ಕುಟುಂಬಸ್ಥರಿಗೆ ಆತಂಕ ತಂದೊಡ್ಡಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.