ಬ್ಯಾಡಗಿ:ವಿಶ್ವದಲ್ಲಿಯೇ ಹೋಮೀಯೋಪತಿ ಎರಡನೇ ಪ್ರಮುಖ ವೈದ್ಯ ಪದ್ಧತಿಯಾಗಿದ್ದು, ಸುಮಾರು 70ಕ್ಕೂ ಹೆಚ್ಚು ದೇಶಗಳಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಖ್ಯಾತ ಹೋಮಿಯೋಪತಿ ವೈದ್ಯ ಡಾ. ವೀರೇಶಕುಮಾರ ಹೊಸ್ಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಗಟ್ಟಿಯಾಗುತ್ತಿದೆ ಹೋಮೀಯೋಪತಿ: ದೇಶದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಹೋಮೀಯೋಪತಿ ವೈದ್ಯಕೀಯ ಮಹಾವಿದ್ಯಾಲಯಗಳಿವೆ. 3.50 ಲಕ್ಷ ಹೋಮೀಯೋಪತಿ ವೈದ್ಯರಿದ್ದಾರೆ, ಎಂಟು ಸಾವಿರ ಡಿಸ್ಪೆನ್ಸರಿಗಳಿವೆ, ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಹೋಮೀಯೋಪತಿ ವೈದ್ಯರಿದ್ದಾರೆ. ಇತ್ತೀಚಿಗೆ ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ, ಅತಿಯಾದ ಒತ್ತಡ ಮತ್ತು ಮಾಲಿನ್ಯದಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮವಾಗಿ ಅತಿಯಾದ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳಿಗೆ ಯುವ ಸಮೂಹ ಒಳಗಾಗುತ್ತಿದ್ದಾರೆ ಇಂತಹವರು ಹೋಮಿಯೋಪತಿ ಔಷಧಿಗಳನ್ನು ಬಳಸುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಸದುಪಯೋಗಪಡಿಸಿಕೊಳ್ಳಿ: ಹೊಮಿಯೋಪತಿ ವೈದ್ಯಕೀಯ ಪದ್ಧತಿಯಲ್ಲಿ ದಿನನಿತ್ಯ ತೆಗೆದುಕೊಳ್ಳುವಂತಹ ಸಾಂಪ್ರದಾಯಿಕ ಔಷಧಿಯಾಗಿದ್ದು ಸಂಧಿವಾತ, ಉಸಿರಾಟದ ಅಲರ್ಜಿ, ಚರ್ಮದ ತೊಂದರೆ ಮುಂತಾದ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಹೊಂದಿದೆ, ಇತ್ತೀಚೆಗೆ ಸರ್ಕಾರಗಳು ಆಯುಷ್ ಪದ್ಧತಿಗೆ ಹೆಚ್ಚು ಒತ್ತುನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಇದಕ್ಕೂ ಮುನ್ನ ಡಾ.ಹ್ಯಾನಿಮನ್ ಅವರ ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ವೈದ್ಯರಾದ ಮಹೇಶ, ಚೇತನ, ವೀರೇಶ, ನಾಗರಾಜ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.