ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹೊಸಬೂದನೂರು ಗ್ರಾಮದ ಶ್ರೀಕಾಶಿವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗ ಮಟ್ಟದ ಹೊನಲು-ಬೆಳಕಿನ ಕಬಡ್ಡಿ ಉತ್ಸವದ ಚಾಂಪಿಯನ್ ಆಗಿ ಕೆನ್ನಾಳು ಕದಂಬ ತಂಡ ಹೊರಹೊಮ್ಮಿದೆ.ರೋಚಕತೆಯಿಂದ ಕೂಡಿದ್ದ ಫೈನಲ್‌ನಲ್ಲಿ ಸಾತನೂರು ಲಕ್ಷ್ಮೀನರಸಿಂಹ ತಂಡವನ್ನು ೧೦ (೨೭-೧೭) ಅಂಕಗಳಿಂದ ಕೆನ್ನಾಳು ಕದಂಬ ತಂಡವು ಗೆಲುವು ಸಾಧಿಸುವ ಮೂಲಕ ೩೩ ಸಾವಿರ ನಗದು ಹಾಗೂ ಪಾರಿತೋಷಕವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದ ಸಾತನೂರು ಲಕ್ಷ್ಮೀನರಸಿಂಹ ತಂಡವು ೨೩ ಸಾವಿರ ರು. ನಗದು ಹಾಗೂ ಪಾರಿತೋಷಕವನ್ನು ಪಡೆಯಿತು.
ಕೆನ್ನಾಳು ಕದಂಬ ತಂಡದ ಮನೋಜ್ ಕುಮಾರು ಉತ್ತಮ ದಾಳಿ ಮಾಡುವ ಮೂಲಕ ತಮ್ಮ ತಂಡ ಪ್ರಥಮ ಸ್ಥಾನ ಗಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಬೂದನೂರು ಬುಲ್ಸ್ ತೃತೀಯ ಹಾಗೂ ಚಿಕ್ಕಮಂಡ್ಯದ ಕಾಶಿವಿಶ್ವನಾಥ ತಂಡವು ಚತುರ್ಥ ಸ್ಥಾನ ಪಡೆದವು.ಕಬಡ್ಡಿ ಮಂಡ್ಯ ಮಣ್ಣಿನ ಕ್ರೀಡೆ:
ಸೆಮಿ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿದ ಶಾಸಕ ಪಿ.ರವಿಕುಮಾರ್‌ಗೌಡ ಮಾತನಾಡಿ, ಮಂಡ್ಯ ಎಂದರೆ ಕಬಡ್ಡಿಗೆ ಪ್ರಸಿದ್ಧಿ. ಕಬಡ್ಡಿ ಮಂಡ್ಯ ಮಣ್ಣಿನ ಕ್ರೀಡೆ. ಗ್ರಾಮೀನ ಕ್ರೀಡೆಯಾಗಿರುವ ಕಬಡ್ಡಿಯನ್ನು ಇನ್ನೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.ಕ್ರೀಡೆಯಲ್ಲಿ ಗೆಲುವು-ಸೋಲು ಎರಡೂ ಇರಬೇಕು. ಗೆದ್ದವರು ಖುಷಿ ಪಡುವುದು, ಸೋತವರು ನಿರಾಸರಾಗಬಾರದು. ಹಳ್ಳಿ ಹಳ್ಳಿಯಲ್ಲೂ ಕಬಡ್ಡಿ ಆಟಗಳು ನಡೆಯಬೇಕು. ಇದರಿಂದ ಯುವಕರು ಸದೃಢರಾಗುವುದರ ಜೊತೆಗೆ ಗ್ರಾಮೀಣ ಕ್ರೀಡೆಯನ್ನು ಉಳಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಗ್ರಾಮದ ಯಜಮಾನರಾದ ಜಯರಾಮ್, ಶೇಖರ್, ಗ್ರಾಪಂ ಸದಸ್ಯರಾದ ನಾಗೇಶ್, ಶಿಲ್ಪ, ಮಾಜಿ ಸದಸ್ಯ ರಾಮರಾಜು, ತಾಪಂ ಮಾಜಿ ಸದಸ್ಯ ಬಿ.ಎನ್.ರಘು, ಕಬಡ್ಡಿ ಉತ್ಸವದ ಆಯೋಜಕರಾದ ಮಂಜು, ಚೈತ್ರೇಶ್ ಇತರರಿದ್ದರು.