ಸಿದ್ದಾಪುರ: ಸಹಕಾರಿ ಸಂಘಗಳು ಸರಿಯಾದ ರೀತಿಯಲ್ಲಿ ಪ್ರಾಮಾಣಿಕ, ವಿಶ್ವಾಸಾರ್ಹ ವ್ಯವಹಾರದಿಂದ ಠೇವಣಿದಾರರ, ಷೇರುದಾರರ ವಿಶ್ವಾಸ ಗಳಿಸುವುದು ಮುಖ್ಯ. ಆ ನಿಟ್ಟಿನಲ್ಲಿ ಶಿರಳಗಿ ಸಹಕಾರಿ ಸಂಘ ಉತ್ತಮ ಸಾಧನೆ ಮಾಡಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಶ್ಲಾಘಿಸಿದರು.ತಾಲೂಕಿನ ಶಿರಳಗಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನೂತನವಾಗಿ ನಿರ್ಮಿಸಲಾದ ಸಹಕಾರ ಭವನವನ್ನು ಉದ್ಘಾಟಿಸಿ ಮಾತನಾಡಿ, ೧೯೬೦ರಲ್ಲಿ ಆರಂಭಗೊಂಡ ಈ ಸಂಘ ಸಾಕಷ್ಟು ಅಭಿವೃದ್ಧಿ ಹೊಂದಲು ಹಿಂದಿನ ಹಾಗೂ ಇಂದಿನ ಆಡಳಿತ ಮಂಡಳಿ ಹಾಗೂ ಸಂಘದ ಸದಸ್ಯರು ಕಾರಣ. ಅತ್ಯುತ್ತಮ ಸೇವೆ ಒದಗಿಸುವ ಮೂಲಕ ಈ ಭಾಗದ ರೈತರಿಗೆ ಆರ್ಥಿಕ ಸಹಕಾರ ನೀಡುತ್ತ ಬಂದಿದೆ. ಕೋಟ್ಯಂತರ ರು. ಲಾಭ ಮಾಡುವ ಸಹಕಾರಿ ಸಂಘಗಳು ಸದಸ್ಯರಿಗೆ ಡಿವಿಡೆಂಡ್ ನೀಡದ ಈ ಸಂದರ್ಭದಲ್ಲಿ ಈ ಸಂಘ ಶೇ. ೫ರಷ್ಟು ಡಿವಿಡೆಂಡ್ ಸದಸ್ಯರಿಗೆ ನೀಡಿದ್ದು ಶ್ಲಾಘನೀಯ ಎಂದರು.ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿದರು. ಎಪಿಎಂಸಿ ಸಹಾಯಕ ನಿರ್ದೇಶಕ ಮಂಗೇಶ ನಾಯ್ಕ, ತೆರಿಗೆ ಸಲಹೆಗಾರ ಎಂ. ಎಸ್. ಶೇಟ್, ಸಂಘದ ಉಪಾಧ್ಯಕ್ಷ ಗಜಾನನ ಗೌಡ ಹೆರವಳ್ಳಿ, ನಿರ್ದೇಶಕರಾದ ಚೌಡಾ ನಾಯ್ಕ ಹಂಜಕ್ಕಿ, ದಯಾನಂದ ಚಲವಾದಿ ಮುಗದೂರು, ದೇವಕಿ ನಾಯ್ಕ ಮುಗದೂರು, ಈಶ್ವರ ನಾಯ್ಕ ಬಿಕ್ಕಳಸೆ, ರಾಘವೇಂದ್ರ ನಾಯ್ಕ ಶಿರಳಗಿ, ಮಹಾಬಲೇಶ್ವರ ಮಡಿವಾಳ ಮುಗದೂರು, ಗುರುವಯ್ಯ ಗೌಡ ಹಂಜಕ್ಕಿ, ಜಗದೀಶ ನಾಯ್ಕ ಬಿಕ್ಕಳಸೆ ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪರಶುರಾಮ ಕೆ. ನಾಯ್ಕ ಮುಗದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಬ್ಯಾಂಕ್ ಪ್ರತಿನಿಧಿ ಶ್ರೀಕಾಂತ ಎಲ್. ಭಟ್ಟ ಸ್ವಾಗತಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ದಯಾನಂದ ತಡಗಳಲೆ, ರಾಜು ನಾಯ್ಕ ಸೇರಿದಂತೆ ಸಂಘದ ಸಿಬ್ಬಂದಿ ಸಹಕರಿಸಿದರು.