ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶೇಷಚೇತನರು ಕೂಡ ನಾಡಿನ ನಾಯಕರಾಗಬೇಕೆಂಬುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ವಿಶೇಷಚೇತನರು ಇಂದಿನಿಂದಲೇ ರಾಜಕಾರಣದಲ್ಲಿ ಆಸಕ್ತಿ ವಹಿಸಿಕೊಂಡು ತಮಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಂತೆ ಮೀಸಲಾತಿ ನೀಡಬೇಕು ಎಂದು ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಒತ್ತಾಯಿಸಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಲಹೆ ನೀಡಿದರು.ವಿಶ್ವ ವಿಶೇಷಚೇತನರ ದಿನಾಚರಣೆ ಅಂಗವಾಗಿ ಭಾನುವಾರ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷಚೇತನರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿಶೇಷಚೇತನರು ರಾಜಕಾರಣಕ್ಕೆ ಬರಬೇಕು ಅದಕ್ಕೆ ನಮಗೂ ಟೀಕೆಟ್ ನೀಡಿ ನಾವೂ ಗೆಲ್ಲುತ್ತೆವೆ ಎಂಬ ಬೇಡಿಕೆ ಇಡಬೇಕು. ನಿಮ್ಮ ಹಕ್ಕುಗಳನ್ನು ಪಡೆಯಲು ರಾಜ್ಯ, ರಾಷ್ಟ್ರ ನಾಯಕರಾಗಬೇಕು. ಕೆಲವು ವರ್ಷಗಳ ಹಿಂದೆ ರಾಜೀವ ಗಾಂಧಿ, ಪಿ.ವಿ.ನರಸಿಂಹರಾವ್ ಅವರು ಪ್ರಧಾನಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ ಆಂದ್ರಪ್ರದೇಶ ರಾಜ್ಯದ ವಿಶೇಷಚೇತನಾಗಿದ್ದ ಜೈಪಾಲ್ ರೆಡ್ಡಿಯವರು ವ್ಹೀಲ್ ಚೇರ್ ಮೇಲೆ ಓಡಾಡಿಯೇ ಸುಮಾರು ಇಪ್ಪತ್ತೈದು ಮೂವತ್ತು ವರ್ಷ ವಿವಿಧ ಖಾತೆಗಳ ಕೇಂದ್ರ ಮಂತ್ರಿಯಾಗಿ ಎಲ್ಲ ಹುದ್ದೆಗಳನ್ನು ನಿಭಾಯಿಸಿದ್ದರು. ಅವರಂತೆ ಬಾಗಲಕೋಟೆ ವಿಶೇಷಚೇತನರು ಕೂಡ ಮಿಂಚಬೇಕು ಎಂದರು.
ಕೈ, ಕಾಲು, ಕಣ್ಣು ಎಲ್ಲ ಅಂಗಾಂಗಳು ಸರಿಯಾಗಿ ಇದ್ದರೂ ಎಷ್ಟೋ ಜನರು ತಮ್ಮ ಜೀವನ ವ್ಯರ್ಥವಾಗಿ ಕಳೆದವರು ಇದ್ದಾರೆ, ಅವರನ್ನು ವಿಶೇಷಚೇತನರು ಎನ್ನಬೇಕಾಗುತ್ತದೆ. ನಿಮ್ಮ ವಿಕಲತೆ ಮರೆಮಾಚಿ ಧೈರ್ಯದಿಂದ ಮುನ್ನುಗ್ಗಲು ಛಲ ತೊಟ್ಟಲ್ಲಿ ಸಾಧನೆ ದಾರಿ ಸರಳವಾಗಿರುತ್ತದೆ. ಇತರ ಕ್ರೀಡಾಪಟುಗಳಿಗಿಂತ ವಿಶೇಷಚೇತನ ಕ್ರೀಡಾಪಟುಗಳು ಪ್ಯಾರಾ ಒಲಂಪಿಕ್‌ನಲ್ಲಿ ಭಾಗವಹಿಸಿ 29 ಕ್ರೀಡೆಗಳಲ್ಲಿ ಈ ದೇಶದ ಕೀರ್ತಿ ಪತಾಕಿ ಹಾರಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಮಾತನಾಡಿ, ವಿಶೇಷಚೇತನರಿಗೆ ಅನುಕಂಪ ಅಥವಾ ಅಯ್ಯೋ ಪಾಪ ಎನ್ನುವ ಭಾವನೆ ತೋರದೆ ಅವಕಾಶ ನೀಡುವ ಕೆಲಸವಾಗಬೇಕಾಗಿದೆ. ವಿಶೇಷಚೇತನರಿಗೆ ದೇವರು ವಿಶೇಷವಾದ ಶಕ್ತಿ ನೀಡಿರುತ್ತಾನೆ ಎಂಬ ನಂಬಿಕೆ ಇದೆ. ದೇವರು ನೀಡಿರುವಂತಹ ಸಂಗೀತ, ಚಿತ್ರಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯ, ರಾಷ್ಟ್ರಮಟ್ಟದ ಕಲಾವಿದರಾಗಿ ಬಲಿಷ್ಠರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ, ಅಂಗವಿಕಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ರಾಜು ತೇರದಾಳ, ಕಾರ್ಯದರ್ಶಿ ರಘು ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.