ಕನ್ನಡಪ್ರಭ ವಾರ್ತೆ ವಿಜಯಪುರ
ಗ್ರಾಮೀಣ ಭಾಗದಲ್ಲಿ ರೈತರ ಸಮಗ್ರ ಅಭಿವೃದ್ಧಿಯಲ್ಲಿ ಸಹಕಾರಿ ಫ್ಯಾಕ್ಸುಗಳು ಅತ್ಯುತ್ತಮ ಸೇವೆ ನೀಡುತ್ತಿವೆ. ಆದರೂ ಸಮನ್ವಯ, ಸಾಮರಸ್ಯ ಹಾಗೂ ಪ್ರಾಮಾಣಿಕತೆಯಿಂದ ಇನ್ನೂ ಪರಿಣಾಮಕಾರಿ ಸೇವೆ ನೀಡುವ ಅಗತ್ಯವಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಚಿವ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು.ನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘಗಳ ಆಡಳಿತ ಮಂಡಳಿಗೆ ಪ್ರಥಮ ಬಾರಿಗೆ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರು, ಪದಾಧಿಕಾರಿಗಳಿಗೆ ಬ್ಯಾಂಕ್‌ನಿಂದ ಹಮ್ಮಿಕೊಂಡಿದ್ದ ಸಹಕಾರ ಸಂಘಗಳ ಸಮಪರ್ಕಕ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾಮಾಣಿಕತೆ, ಬದ್ಧತೆ ಹಾಗೂ ಸಹಕಾರ ತತ್ವದ ಸೇವೆಯೇ ಸಹಕಾರಿ ರಂಗದ ಮೂಲತತ್ವ ಹಾಗೂ ಧ್ಯೇಯ. ಹೀಗಾಗಿ ಸಹಕಾರಿ ರಂಗದ ಆಡಳಿತ ಚುಕ್ಕಾಣಿ ಹಿಡಿರುವ ಸಹಕಾರಿಗಳು ಸೇವಾ ಬದ್ಧತೆ, ಸಹಕಾರಿ ತತ್ವಪರತೆಯಿಂದ ಆಡಳಿತ ನಡೆಸಿದಲ್ಲಿ ಕೃಷಿ ಆಧಾರಿತ ಗ್ರಾಮೀಣ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಗ್ರಾಮೀಣ ಭಾಗದಲ್ಲಿ ರೈತರಿಗೆ ಬೀಜ, ಗೊಬ್ಬರ, ಪಡಿತರ, ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ, ಕೃಷಿಯೇತರ ಸಾಲ ವಿತರಣೆಯಲ್ಲಿ ಗ್ರಾಮೀಣ ಸಹಕಾರಿ ಸಂಘಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ಸದಸ್ಯರ ಠೇವಣಿ ₹ ೧೦೩೯ ಕೋಟಿ ಸಂಗ್ರಹದೊಂದಿಗೆ ದಾಖಲಾರ್ಹ ಸಾಧನೆ ಮಾಡಿದೆ. ೨.೯೪ ಲಕ್ಷ ಸದಸ್ಯರಿಗೆ ₹ ೨೩೬೦ ಕೋಟಿ ಸಾಲ ನೀಡಿದ್ದು, ಫ್ಯಾಕ್ಸ್‌ಗಳು ₹ ೩೩೨೧ ಕೋಟಿ ದುಡಿಯುವ ಬಂಡವಾಳ ಹೊಂದಿವೆ. ೨೪೫ ಸಹಕಾರಿ ಸಂಘಗಳು ಲಾಭದಲ್ಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇಂಥ ಪ್ರಗತಿ, ಸಾಧನೆಯ ಮಧ್ಯೆಯೂ ಜಿಲ್ಲೆಯಲ್ಲಿ ೨೭ ಸಂಘಗಳು ನಷ್ಟದಲ್ಲಿದ್ದು, ಕೆಲವೆಡೆ ಆರ್ಥಿಕ ಅಹಿತಕರ ಘಟನೆಗಳು ವರದಿಯಾಗಿವೆ. ಇಂಥ ಸಂಘಗಳನ್ನು ಆರ್ಥಿಕ ಪ್ರಗತಿಯತ್ತ ತರುವಲ್ಲಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಪ್ರಾಮಾಣಿಕ ಸೇವೆ ಸಲ್ಲಿಸಬೇಕಿದೆ. ಪಾರದರ್ಶಕ ಆಡಳಿತದಿಂದ ಉತ್ತಮ ಸೇವೆ ಸಲ್ಲಿಸಿದಲ್ಲಿ, ನಷ್ಟದಲ್ಲಿರುವ ಫ್ಯಾಕ್ಸ್‌ಗಳನ್ನು ಉನ್ನತಿಗೇರಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶೇಖರ ದಳವಾಯಿ, ಹಣಮಂತ್ರಾಯಗೌಡ ಪಾಟೀಲ, ಕಲ್ಲನಗೌಡ ಪಾಟೀಲ, ಸುರೇಶಗೌಡ ಬಿರಾದಾರ, ಅರವಿಂದ ಪೂಜಾರಿ, ಸಹಕಾರಿ ಸಂಘಗಳ ಇಂಡಿ ಉಪ ವಿಭಾಗದ ಸಹಾಯಕ ನಿಬಂಧಕ ಕೆ.ಎಚ್.ವಡ್ಡರ, ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಕರು, ನೋಡಲ್ ಅಧಿಕಾರಿಗಳು, ಕ್ಷೇತ್ರಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.ಢವಳಗಿ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ ಸ್ವಾಗತಿಸಿದರೆ, ಉಪ ಪ್ರಧಾನ ವ್ಯವಸ್ಥಾಪಕ ಜೆ.ಬಿ.ಪಾಟೀಲ ವಂದಿಸಿದರು.