ಮುಂಡಗೋಡ: ಸಂಸ್ಥೆಗೆ ಯಾವುದೇ ಅಪವಾದ ಬಾರದಂತೆ ನೋಡಿಕೊಂಡು ಹೋಗಬೇಕು. ಸಂಸ್ಥೆಯ ಎಲ್ಲ ವಿಭಾಗದ ಸಿಬ್ಬಂದಿ ತಮ್ಮದೆ ಸ್ವಂತ ಸಂಸ್ಥೆ ಎಂದು ಭಾವಿಸಿ ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದರೆ ಸಂಸ್ಥೆ ವಿಶ್ವಾಸಾರ್ಹವಾಗಿ ಬೆಳೆಯಲು ಸಾಧ್ಯ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ತಿಳಿಸಿದರು.ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಮಾರ್ಕೆಟಿಂಗ್ ಸೊಸೈಟಿಯ ೨೦೨೩- ೨೪ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.
ಬಂದ್ ಮಾಡಲಾಗಿರುವ ಸೊಸೈಟಿಯ ಆವರಣದಲ್ಲಿರುವ ಅಕ್ಕಿ ಮಿಲ್(ಗಿರಣಿ) ಪುನಾರಂಭಿಸಬೇಕು ಅಥವಾ ಬಾಡಿಗೆಗೆ ನೀಡಬೇಕು. ಅಥವಾ ರೈಸ್ ಮಿಲ್ ದೊಡ್ಡ ಪ್ಲಾಂಟ್ ಇದೆ. ಅದನ್ನು ಸಣ್ಣ ಪ್ಲಾಂಟ್‌ನ್ನಾಗಿ ಪರಿವರ್ತಿಸಿ ಎಂದ ಅವರು, ಒಟ್ಟಾರೆಯಾಗಿ ರೈತರ ಸಂಸ್ಥೆಯನ್ನು ಯಾವತ್ತೂ ನಷ್ಟದ ಹಾದಿಗೆ ನೂಕದೆ ಲಾಭದತ್ತ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡಿದರು.ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ. ಪಾಟೀಲ ಮಾತನಾಡಿ, ರೈತರು ಸಾಕಷ್ಟು ಶ್ರಮಪಟ್ಟು ಕಟ್ಟಿರುವ ಸಂಸ್ಥೆ ಇದಾಗಿದ್ದು, ಕೆಲವು ವರ್ಷಗಳ ಹಿಂದೆ ನಡೆದ ಅವ್ಯವಹಾರದಿಂದಾಗಿ ಸಂಸ್ಥೆಯು ನಷ್ಟದತ್ತ ಹೋಗಿರುವುದು ಬೇಸರವಾಗಿದೆ. ಈ ಸಂಸ್ಥೆಯ ಬೆಳವಣಿಗೆಗೆ ನಾವೆಲ್ಲ ಹಿರಿಯರು ಕೈಜೋಡಿಸಲು ಸಿದ್ಧ ಎಂದರು. ಸಂಘದ ಅಧ್ಯಕ್ಷ ಚೇತನ್ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘ ಲಾಭದಲ್ಲಿ ಸಾಗುತ್ತಿದೆ. ಯಾವುದೇ ತೊಂದರೆ ಇಲ್ಲ ಎಂದಾಗ, ಸಂಘದಲ್ಲಿ ಹಿಂದೆ ನಡೆದಿರುವ ಬಗ್ಗೆ ಕೈಗೊಳ್ಳಲಾದ ಕ್ರಮದ ಬಗ್ಗೆ ಹಲವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಹಲವು ವರ್ಷಗಳ ಹಿಂದಿನ ಆಡಳಿತ ಕಮಿಟಿಯಲ್ಲಿ ನಡೆದ ಅವ್ಯವಹಾರದ ಕುರಿತು ತಪ್ಪಿತಸ್ಥರ ಮೇಲೆ ಕ್ರಮವಾಗಿದ್ದು, ಪ್ರಕರಣವೀಗ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಾಗಾಗಿ ಆ ವಿಷಯವನ್ನು ಬಿಟ್ಟು ಹೊಸ ಯೋಜನೆಗಳ ಬಗ್ಗೆ ಚರ್ಚಿಸೋಣ ಎಂದರು.ಸೊಸೈಟಿ ವ್ಯವಸ್ಥಾಪಕ ಮಂಜುನಾಥ ರಾವಳೆಕರ ಆಡಾವೆ ಪತ್ರವನ್ನು ಓದಿ ೨೦೨೩- ೨೪ನೇ ಸಾಲಿನಲ್ಲಿ ಮಾರ್ಕೆಟಿಂಗ್ ಸೊಸೈಟಿಯು ಸುಮಾರು ₹೧೦ ಲಕ್ಷ ಲಾಭ ಗಳಿಸಿದೆ ಎಂದರು.ಸಂಸ್ಥೆಯ ಉಪಾಧ್ಯಕ್ಷ ಸಂತೋಷ ಭೋಸಲೆ, ಸದಸ್ಯರಾದ ಸುನೀಲ ವೆರ್ಣೇಕರ, ಪರಶುರಾಮ ತಹಸೀಲ್ದಾರ, ಉಮೇಶ ಗಾಣಿಗೇರ, ಮಂಜುನಾಥ ಪಾಟೀಲ, ಎಂ.ಪಿ. ಕುಸೂರ, ತುಕಾರಾಮ ಇಂಗಳೆ ಮುಂತಾದವರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕಿತ್ತೂರ ನಿರೂಪಿಸಿ, ವಂದಿಸಿದರು.