ಜೋಯಿಡಾ: ತಾಲೂಕಿನ ಕುಂಬಾರವಾಡದ ಅಂಬೇಡ್ಕರ್ ಭವನದಲ್ಲಿ ವೈಜ್ಞಾನಿಕ ಜೇನು ಬೇಸಾಯದ ಕುರಿತು ಎರಡು ದಿನಗಳ ಜಿಲ್ಲಾ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್. ಭಾರತಿ ಮಾತನಾಡಿ, ಸರ್ಕಾರ ಜೋಯಿಡಾ ತಾಲೂಕನ್ನು ಸಾವಯವ ತಾಲೂಕೆಂದು ಘೋಷಿಸಿದೆ. ಜೇನುಕೃಷಿ ಮಾಡುವವರಿಗೆ ಇದು ವರದಾನ ಎಂದೇ ಹೇಳಬಹುದು. ಮನೆಯಲ್ಲಿಯೇ ಕುಳಿತು ಹೆಣ್ಣು ಮಕ್ಕಳು ಜೇನು ಕೃಷಿ ಮಾಡಿ ತಮ್ಮ ಆದಾಯ ಹೆಚ್ಚು ಮಾಡಿಕೊಳ್ಳಿ ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಎಸ್. ಮಾತನಾಡಿ, ಅರಣ್ಯ ಇಲಾಖೆ ಇಲ್ಲಿ ಜೇನು ಕೃಷಿ ತರಬೇತಿ ನೀಡುತ್ತಿದೆ. ಇಲ್ಲಿ ಸಾಕಷ್ಟು ಅರಣ್ಯ ಪ್ರದೇಶ ಇರುವುದರಿಂದ ಜೇನು ಸಾಕಾಣಿಕೆ ಮಾಡಲು ಇಲಾಖೆ ಸಹಕಾರ ನೀಡುತ್ತದೆ ಎಂದರು.
ಗ್ರಾಮೀಣ ಅಭಿವೃದ್ಧಿ ಯೋಜನಾ ನಿರ್ದೇಶಕ ಚಂದ್ರಶೇಖರ ಸೊಪ್ಪಿಮಠ, ಕಾಳಿ ಉತ್ಪಾದಕರ ಸಂಘದ ಅಧ್ಯಕ್ಷ ಶಾಂತಾರಾಮ ಕಾಮತ ಮಾತನಾಡಿದರು. ಗ್ರಾಚಾ ಅಧ್ಯಕ್ಷ ಚನ್ನಮ್ಮ ದೊಂಬರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಸಂತೋಷ ಎಕ್ಕಳ್ಳಿ ಕರ, ಯಲ್ಲಾಲಿಂಗ ಮಲ್ಲಾಪುರ, ಲಕ್ಷ್ಮಣ ಕಾಂಬಳೆ, ಹನುಮಂತ ಹುಕ್ಕೇರಿ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಜವರೇಗೌಡ, ಗಾಯತ್ರಿ ಬಡಿಗೇರ, ವೆಂಕಟೇಶ ಹೊಸಮನಿ, ಶ್ರೇಯಾ ಬಕ್ಕಳ್, ರವಿ ರೇಡ್ಕರ್ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿರಸಿಯಲ್ಲಿ ನಡೆದ ಫಲ-ಪುಷ್ಪ ಪ್ರದರ್ಶನದಲ್ಲಿ ಬಹುಮಾನ ಗೆದ್ದ ಶಿಲ್ಪಾ ರವೀಂದ್ರ ದೇಸಾಯಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವಂ ಮತ್ತು ವಿನೋದ ಕಾರ್ಯಕ್ರಮ ನಡೆಸಿಕೊಟ್ಟರು.