ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಹೊನ್ನಹಳ್ಳಿ ಗ್ರಾಮಪಂಚಾಯಿತಿ ಅಧಿಕಾರ ಬಿಜೆಪಿ ಬೆಂಬಲಿಗರ ಪಾಲಾಗಿದ್ದು, ಅಧ್ಯಕ್ಷರಾಗಿ ಎನ್. ರವಿಕುಮಾರ್, ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆಯಾದರು. ಗ್ರಾಪಂ ಅಧ್ಯಕ್ಷರಾಗಿದ್ದ ಮಲ್ಲೇಶ್, ಉಪಾಧ್ಯಕ್ಷರಾಗಿದ್ದ ಶಿವಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು. ಗ್ರಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿಗರಾಗಿ ಎನ್. ರವಿಕುಮಾರ್, ಕಾಂಗ್ರೆಸ್‌ನಿಂದ ಚನ್ನಪ್ಪನಪುರ ಪ್ರಸಾದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ, ಮಂಗಳಮ್ಮ ಸ್ಪರ್ಧೆ ಮಾಡಿದ್ದರು. ಗ್ರಾಪಂ ೧೪ ಸದಸ್ಯ ಬಲದಲ್ಲಿ ಸಭೆಗೆ ೧೨ ಮಂದಿ ಹಾಜರಾಗಿದ್ದು, ಇಬ್ಬರು ಸದಸ್ಯರು ಗೈರಾಗಿದ್ದರು. ಬಳಿಕ ಮತದಾನ ನಡೆದು ಎನ್. ರವಿಕುಮಾರ್ ಹಾಗೂ ಮಂಜುಳಾ ಅವರು ತಲಾ ೭ ಮತಗಳನ್ನು ಪಡೆದು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಪ್ರಸಾದ್ ಮತ್ತು ಮಂಗಳಮ್ಮ ಅವರು ಐದು ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ವಿಶ್ವನಾಥ್ ಅಧಿಕೃತವಾಗಿ ಘೋಷಣೆ ಮಾಡಿದರು. ಸಭೆಯಲ್ಲಿ ಗ್ರಾಪಂ ಸದಸ್ಯರಾದ ಅಮೃತ, ಶಿವಮ್ಮ, ದೇವಶೆಟ್ಟಿ, ಸುಂದ್ರಮ್ಮ, ಶಂಕರಗುರು, ಕಾಂತರಾಜು, ಮಹದೇವಮ್ಮ ಹಾಗೂ ಪಿಡಿಓ ಲಕ್ಷ್ಮಣನಾಯಕ್ ಉಪಸ್ಥಿತರಿದ್ದರು. ವಿಜಯೋತ್ಸವ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿಗರು ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬಿಜೆಪಿ ಬಾವುಟ ಹಿಡಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮಗಳ ಅಭಿವೃದ್ದಿಯ ಕನಸು ಕಂಡು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಯೋಜನೆಗಳ ಅನುದಾನವನ್ನು ನೀಡುತ್ತಿದ್ದಾರೆ. ಗ್ರಾಮಗಳ ಅಬಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದ ಪರಿಣಾಮ ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ. ಕೇಂದ್ರದ ಯೋಜನೆಗಳಾದ ಮನೆ ಮನೆಗೆ ನಲ್ಲಿಗಳ ಮೂಲಕ ಶುದ್ದ ಕುಡಿಯುವ ನೀರು, ಆಶ್ರಯ ಮನೆಗಳ ನಿರ್ಮಾಣ, ಸ್ವಚ್ಚತಾ ಭಾರತ್, ಮುದ್ರಾ ಯೋಜನೆ, ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಹಾಗೂ ಗುಡಿ ಕೈಗಾರಿಕೆಗಳ ಪ್ರೋತ್ಸಾಹ, ರೈತರ ಅಭಿವೃದ್ದಿ ವಿಶೇಷ ಯೋಜನೆಗಳನ್ನು ನೀಡಿದ್ದಾರೆ. ಇವುಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಗ್ರಾ.ಪಂ. ಆಡಳಿತವನ್ನು ಬಲಿಷ್ಠಗೊಳಿಸಲು ಮುಂದಾಗಬೇಕು. ಈ ಎಲ್ಲಾ ಯೋಜನೆಗಳು ಪಂಚಾಯಿತಿ ಮಟ್ಟದಲ್ಲಿ ಜಾರಿಗೊಂಡು ಆರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು ಎಂದರು. ನೂತನ ಅಧ್ಯಕ್ಷ ಎನ್. ರವಿಕುಮಾರ್ ಮಾತನಾಡಿ, ಹೊನ್ನಹಳ್ಳಿ ಗ್ರಾಪಂ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿರುವ ಎಲ್ಲಾ ಸದಸ್ಯರು ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿರುವ ಎಲ್ಲ ಮುಖಂಡರು ಹಾಗೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಿನಿಂದ ಪಂಚಾಯಿತಿಯ ಅಭಿವೃದ್ದಿಗೆ ದುಡಿಯೋಣ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಲೋಕೇಶ್, ಸುರೇಶ್, ತಾ.ಪಂ.ಮಾಜಿ ಸದಸ್ಯ ಚಿಕ್ಕಮಾದೇಗೌಡ, ಮಹೇಶ್, ಮಲ್ಲೇಶ್, ರವೀಂದ್ರ, ಚನ್ನಪ್ಪನಪುರ ಸಂಪತ್ತು, ಮೊದಲಾದವರು ಇದ್ದರು.