ಕನ್ನಡಪ್ರಭ ವಾರ್ತೆ ನಂಜನಗೂಡುಮಾನವ ಜೀವನ ಶಾಶ್ವತವಲ್ಲ, ಆದರೆ ಮನುಷ್ಯನು ಮಾಡಿದ ಸತ್ಕಾರ್ಯಗಳ ನೆನಪು ಶಾಶ್ವತವಾಗಿ ಉಳಿಯುತ್ತದೆ ಎಂದು ಬಾಳೆ ಹೊನ್ನೂರು ಶ್ರೀ ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಗೌರಿಘಟ್ಟ ಬೀದಿಯಲ್ಲಿರುವ ಹೊನ್ನಲಗೆರೆ ಮಠದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ 25ನೇ ಪುಣ್ಯಸ್ಮರಣೋತ್ಸವ ಮತ್ತು ಜನ ಜಾಗೃತಿ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಮಾನವ ಜೀವನವು ಜನ್ಮಜನ್ಮಗಳ ಪುಣ್ಯಫಲದಿಂದ ದೊರೆಯುತ್ತದೆ. ಅರಿವು, ಆದರ್ಶ ಮತ್ತು ಮೌಲ್ಯಗಳಿಂದ ಮನುಷ್ಯನ ಬದುಕು ಸಮೃದ್ಧಗೊಳ್ಳಬೇಕು. ಹುಟ್ಟು ಮನುಷ್ಯನಿಗೆ ಸಹಜವಾದಂತೆ ಮರಣವೂ ಅನಿವಾರ್ಯ ಹುಟ್ಟು ಮತ್ತು ಸಾವಿನ ಮಧ್ಯದ ಜೀವನವನ್ನು ಸಾರ್ಥಕವಾಗಿ ರೂಪಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ವೀರಶೈವ ಧರ್ಮದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಕ್ತ ಸಮುದಾಯಕ್ಕೆ ಉತ್ತಮ ಸಂಸ್ಕಾರ, ಸದ್ವಿಚಾರ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೋಧಿಸಿದ ಮಹಾನ್ ತಪಸ್ವಿಗಳಾಗಿದ್ದರು. ಅವರು ಆಚರಿಸಿಕೊಂಡು ಬಂದ ನೀತಿ ಸಂಹಿತೆ, ಮಾಡಿದ ಪೂಜಾ ಫಲ ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳು ಜನಮನದಲ್ಲಿ ಸದಾ ಅವಿಸ್ಮರಣೀಯವಾಗಿ ಉಳಿಯುತ್ತವೆ ಎಂದು ಹೇಳಿದರು.ಹೊನ್ನಲೆಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಸೋಮೇಶ್ವರ ಸ್ವಾಮೀಜಿ ನಂಜನಗೂಡಿಗೆ ಆಗಮಿಸಿರುವುದು ಭಕ್ತ ಸಮುದಾಯಕ್ಕೆ ಅಪಾರ ಹರ್ಷವನ್ನು ತಂದಿದೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ತತ್ವಸಿದ್ಧಾಂತಗಳು ಹಾಗೂ ಶರಣರ ಸಾಮಾಜಿಕ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ರಂಭಾಪುರಿ ವೀರ ಸಿಂಹಾಸನದೀಶ್ವರ ಮಠಕ್ಕೆ 300 ವರ್ಷಗಳ ಇತಿಹಾಸವಿದ್ದು, ನಂಜನಗೂಡಿನ ಶಾಖಾ ಮಠಕ್ಕೆ ಮುಜರಾಯಿ ಇಲಾಖೆಯಿಂದ ಮುಂಬರುವ ದಿನಗಳಲ್ಲಿ ಅನುದಾನ ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶ್ರೀ ರಂಭಾಪುರಿ ಸ್ವಾಮೀಜಿ ಅವರನ್ನು ಭವ್ಯ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮುಡುಕುತೊರೆ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಧನಗೂರು ಮಠದ ಷಡಕ್ಷರ ಶಿವಾಚಾರ್ಯ ಸ್ವಾಮೀಜಿ, ಕಲ್ಲುಬಾಳು ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲ್ಲನ ಮೂಲೆ ಮಠದ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ, ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ, ನವಿಲೂರು ಮಠದ ಚನ್ನಬಸವ ಸ್ವಾಮೀಜಿ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಟಿಎಪಿಸಿಎಂಎಸ್ ಅಧ್ಯಕ್ಷ ಮಹೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ಕಾರ್ಯದರ್ಶಿ ದೇವನೂರು ಶಿವಪ್ಪ ದೇವರು, ಖಜಾಂಚಿ ನಟರಾಜು, ವಿನಯ್ ಕುಮಾರ್, ಎನ್.ಸಿ. ಬಸವಣ್ಣ, ಮಹೇಶ್, ದೇವನೂರು ಮಹದೇವಪ್ಪ, ನಂಜಮಣಿ ಗುರುಮಲ್ಲಪ್ಪ, ಆರ್.ವಿ. ಮಹದೇವಸ್ವಾಮಿ ಭಾಗವಹಿಸಿದ್ದರು.