- ಇತಿಹಾಸದಲ್ಲೇ ಅತ್ಯಧಿಕ ಶೇ.94.5 ಸಾಲ ವಸೂಲಾತಿ । ರಾಘವೇಂದ್ರ ಕೃತಜ್ಞತೆ ಅರ್ಪಣೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ತನ್ನ ಇತಿಹಾಸದಲ್ಲಿಯೇ ಈ ಬಾರಿ ಅತ್ಯಧಿಕ ಅಂದರೆ ಶೇ.94.5 ರಷ್ಟು ಸಾಲ ವಸೂಲಾತಿ ಮಾಡಿದ್ದು, ₹75 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ಹೇಳಿದರು.ಸೋಮವಾರ ಇಲ್ಲಿನ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿ ಸಂಸ್ಥೆ ₹44 ಲಕ್ಷ ನಿವ್ವಳ ಲಾಭ ಗಳಿಸಿತ್ತು. ಈ ಸಾಧನೆಗೆ ಬ್ಯಾಂಕ್ ನ ಆಡಳಿತ ಮಂಡಳಿ, ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಷೇರುದಾರರು ಕಾರಣರಾಗಿದ್ದು, ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಸಂಘದ ಉಪಾಧ್ಯಕ್ಷ ಎಸ್. ಕುಬೇರ ನಾಯ್ಕ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ಓದಿ ದಾಖಲು ಮಾಡಿದರು. ವ್ಯವಸ್ಥಾಪಕರಾದ ಸಿ.ಎನ್. ವಿಶಾಲಾಕ್ಷಿ ಅವರು ಹಿಂದಿನ ಸಾಲಿನ ಮಹಾಸಭೆ ನಡವಳಿಕೆಗಳನ್ನು ಓದಿ ದಾಖಲು ಮಾಡಿದರು. 2025-26ನೇ ಸಾಲಿನ ಲೆಕ್ಕ ಪರಿಶೋಧನೆ ಮತ್ತು ಆರ್ಥಿಕ ತಃಖ್ತೆಗಳನ್ನು ಪರಿಶೀಲಿಸಿ ಅಂಗೀಕರಿಸಲಾಯಿತು. ನಿರ್ದೇಶಕ ಕೆ.ವಿ. ನಾಗರಾಜ್ 2025-26ನೇ ಸಾಲಿನ ಲೆಕ್ಕ ಪರಿಶೋಧಕರು ನಮೂದಿಸಿದ ನ್ಯೂನತೆಗಳಿಗೆ ಆಡಳಿತ ಮಂಡಳಿ ನೀಡಿದ ಅನುಪಾಲನಾ ವರದಿ ಅಂಗೀಕರಿಸುವ ವಿಷಯ ಪ್ರಸ್ತಾಪಿಸಿದರು.
ನಿರ್ದೇಶಕ ಎಂ.ಜಿ.ಆರ್. ಮಂಜುನಾಥ್ ಮಾತನಾಡಿ, 1 ಸಾವಿರಕ್ಕಿಂತ ಕಡಿಮೆ ಷೇರು ಹೊಂದಿರುವ ಷೇರುದಾರರನ್ನು ಅನರ್ಹ ಷೇರುದಾರರೆಂದು ಪರಿಗಣಿಸಿ ಷೇರು ಮೊತ್ತವನ್ನು ಅಮಾನತು ಖಾತೆಗೆ ವರ್ಗಾವಣೆ ಮಾಡಲು ಮಂಜೂರಾತಿ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಅಧ್ಯಕ್ಷ ಅರಬಗಟ್ಟೆ ರಮೇಶ್ ಹಾಗೂ ವ್ಯವಸ್ಥಾಪಕಿ ಸಿ.ಎನ್. ವಿಶಾಲಾಕ್ಷಿ ಅವರು ಷೇರುದಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರು.
- - -
ಹೊನ್ನಾಳಿ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸೋಮವಾರ ನಡೆದ ವಾರ್ಷಿಕ ಮಹಾಸಭೆಯನ್ನು ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ಉದ್ಘಾಟಿಸಿದರು.